×
Ad

ಆಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಲಿಯೊನಾರ್ಡೊ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡ ಭಾರತ

Update: 2021-11-14 21:49 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.14: ಇಟಲಿಯ ಆಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಅದರ ಮಾತೃಸಂಸ್ಥೆ ಲಿಯೊನಾರ್ಡೊ ಮೇಲಿನ ನಿಷೇಧವನ್ನು ವಿಧ್ಯುಕ್ತವಾಗಿ ಹಿಂದೆಗೆದುಕೊಂಡಿರುವ ಭಾರತವು, ಅವು ಹಾಲಿ ಪ್ರಗತಿಯಲ್ಲಿರುವ ಹಲವಾರು ಯೋಜನೆಗಳಲ್ಲಿ ಭಾಗಿಯಾಗಲು ಮತ್ತು ಮುಂಬರುವ ರಕ್ಷಣಾ ಗುತ್ತಿಗೆಗಳಿಗೆ ಬಿಡ್ಗಳನ್ನು ಸಲ್ಲಿಸಲು ಮಾರ್ಗವನ್ನು ಸುಗಮಗೊಳಿಸಿದೆ.

ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಲಂಚದ ಆರೋಪಗಳು ಕುರಿತಂತೆ 2014ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಇವೆರಡೂ ಕಂಪನಿಗಳ ಮೇಲೆ ನಿಷೇಧವನ್ನು ಹೇರಿತ್ತು.
 
ಗೃಹ ಸಚಿವಾಲಯವು ನ.12ರಂದು ಹೊರಡಿಸಿರುವ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ನಿಷೇಧಿತ, ತಡೆಹಿಡಿಯಲಾಗಿರುವ ಮತ್ತು ಅದರೊಂದಿಗೆ ವ್ಯವಹಾರವನ್ನು ಅಮಾನತುಗೊಳಿಸಿರುವ ಕಂಪನಿಗಳ ಪಟ್ಟಿಯಲ್ಲಿ ಇವೆರಡು ಕಂಪನಿಗಳನ್ನು ಹೆಸರಿಸಲಾಗಿಲ್ಲ.

ವಿವಿಐಪಿ ಹೆಲಿಕಾಪ್ಟರ್ ಗಳಿಗೆ ಬೇಡಿಕೆಯನ್ನು ರದ್ದುಗೊಳಿಸಿದ್ದಕ್ಕಾಗಿ 350 ಮಿಲಿಯನ್ ಯುರೋಗಳನ್ನು ಪಾವತಿಸಬೇಕೆಂಬ ತನ್ನ ಹಕ್ಕು ಕೋರಿಕೆಯನ್ನು ಹಿಂದೆಗೆದುಕೊಂಡಿರುವುದಾಗಿ ಲಿಯೊನಾರ್ಡೊ ಪತ್ರವೊಂದನ್ನು ಸಲ್ಲಿಸಿದೆ ಎಂದು ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಮೂಲಗಳು ತಿಳಿಸಿವೆ.

ನಿಷೇಧವನ್ನು ಹಿಂದೆಗೆದುಕೊಂಡಿರುವುದರಿಂದ ಲಿಯೊನಾರ್ಡೊ (ಹಿಂದಿನ ಫಿನ್ ಮೆಕ್ಕಾನಿಕಾ) ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 75ರಲ್ಲಿ ಭಾಗಿಯಾಗಲು ಅವಕಾಶ ನೀಡುತ್ತದೆ ಎಂದು ಅವು ಹೇಳಿದವು. ಈ ಯೋಜನೆಯಡಿ ಆರು ಸ್ಕಾರ್ಪಿನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.

ಈ ಪೈಕಿ ನಾಲ್ಕನ್ನು ನೌಕಾಪಡೆಗೆ ಪೂರೈಸಲಾಗಿದ್ದು,ಅವು ಲಿಯೊನಾರ್ಡೊದಿಂದ ಖರೀದಿಸಬೇಕಿರುವ ಹೆವಿವೇಟ್ ಟಾರ್ಪೆಡೊಗಳನ್ನು ಹೊಂದಿಲ್ಲ. ಲಿಯೊನಾರ್ಡೊ ನಿಷೇಧಕ್ಕೊಳಗಾಗಿದ್ದರಿಂದ ಈ ಖರೀದಿ ಪ್ರಕ್ರಿಯೆಗೆ ಹಿನ್ನಡೆಯುಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News