ಹೈಕೋರ್ಟ್ ಆದೇಶ ಪಾಲಿಸದ ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳ ವಿರುದ್ಧ ಎಫ್ಐಆರ್

Update: 2021-11-14 17:27 GMT

ಹೊಸದಿಲ್ಲಿ, ನ. 13: ನ್ಯಾಯಾಲಯದ ಆದೇಶವನ್ನು ಪಾಲಿಸದೆ ಇದ್ದುದಕ್ಕಾಗಿ ಅಲಹಾಬಾದ್ ಹೈಕೋರ್ಟ್ನಿಂದ ಜಾಮೀನುಯೋಗ್ಯ ವಾರಂಟ್ ಜಾರಿಗೊಳಿಸಲ್ಪಟ್ಟ ಉತ್ತರಪ್ರದೇಶದ ಇಬ್ಬರು ಉನ್ನತ ಸರಕಾರಿ ಅಧಿಕಾರಿಗಳ ಬಂಧನಕ್ಕೆ ಸುಪ್ರೀಂಕೋರ್ಟ್ ಶನಿವಾರ ಅನುಮತಿ ನೀಡಿದೆ.

ರಾಜ್ಯದ ಹಣಕಾಸು ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ವಿರುದ್ಧ ಅಲಹಾಬಾದ್ ಹೈಕೋರ್ಟ್ ವಾರಂಟ್ ಹೊರಡಿಸಿರುವುದನ್ನು ಪ್ರಶ್ನಿಸಿ ಉತ್ತರಪ್ರದೇಶ ಸರಕಾರವು ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೋಹ್ಲಿ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ.

ಈ ಇಬ್ಬರು ಉನ್ನತ ಸರಕಾರಿ ಅಧಿಕಾರಿಗಳು 2017 ರಲ್ಲಿ ಅಲಹಾಬಾದ್ ‘ ಕಲೆಕ್ಷನ್ ಅಮೀನ’ ಒಬ್ಬರಿಗೆ ಹಿರಿತನದ ಸೌಲಭ್ಯ ಹಾಗೂ ನಿಯಮಿತ ಉದ್ಯೋಗವನ್ನು ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಲಹಾಬಾದ್ ಹೈಕೋರ್ಟ್ ಮೆಟ್ಟಲೇರಿದ್ದರು.

ಸಂಗ್ರಹ ಅಮೀನ ಅವರಿಗೆ ಹಿರಿತನದ ಸೌಲಭ್ಯ ಹಾಗೂ ನಿಯಮಿತ ಉದ್ಯೋಗ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದರೂ, ಈ ಆದೇಶವನ್ನು ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಹಣಕಾಸು ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಜಾಮೀನುಯೋಗ್ಯ ವಾರಂಟ್ ಜಾರಿಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರಕಾರವು ಸುಪ್ರೀಂಕೋರ್ಟ್ನ ಮೊರೆ ಹೋಗಿತ್ತು. ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ಪಾಲಿಸದೆ ಇರುವ ಮೂಲಕ ಈ ಇಬ್ಬರು ಅಧಿಕಾರಿಗಳು ನ್ಯಾಯಾಲಯಕ್ಕೆ ಆಗೌರವ ತೋರಿದ್ದರು. ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉದ್ದಟತನದಿಂದ ವರ್ತಿಸಿದ್ದಾರೆಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ.

 ಕಲೆಕ್ಷನ್ ಅಮೀನ ಅವರಿಗೆ ನಿಯಮಿತವಾದ ಉದ್ಯೋಗವನ್ನು ನಿರಾಕರಿಸಿದ್ದರೆ, ಅವರಿಗಿಂತ ಕಿರಿಯರಿಗೆ ಉದ್ಯೋಗವಕಾಶಗಳನ್ನು ನೀಡಿರುವುದನ್ನು ತಾನು ಗಮನಿಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಈ ಇಬ್ಬರು ಅಧಿಕಾರಿಗಳ ಪರವಾಗಿ ವಾದಿಸಿದ ರಾಜ್ಯ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ ಅವರು ಕಲೆಕ್ಷನ್ ಅಮೀನರ ಸೇವೆಯನ್ನು ನಿಯಮಿತಗೊಳಿಸಲಾಗಿದೆ ಹಾಗೂ ಹಿರಿತನದ ಸೌಲಭ್ಯಗಳ ಪಾವತಿ ಮಾತ್ರ ಬಾಕಿಯುಳಿದಿರುವುದಾಗಿ ತಿಳಿಸಿದರು. ಕಲೆಕ್ಷನ್ ಅಮೀನ್ ಅವರಿಗಿಂತ ಕಿರಿಯರಿಗೆ ನೀಡಲಾಗಿದ್ದ ನಿಯಮಿತ ಉದ್ಯೋಗನ್ನು ನೀಡಿರುವುದನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಆದರೆ ಇತರ ಉದ್ಯೋಗಿಗಳನ್ನು ಅವರ ಹುದ್ದೆಗಳಿಂದ ತೆಗೆದುಹಾಕುವಂತೆ ತಾನು ಸರಕಾರಕ್ಕೆ ಸೂಚಿಸಿಲ್ಲ. ಕೇವಲ ಕಲೆಕ್ಷನ್ ಅಮೀನ ಅವರಿಗೆ ಪಾವತಿಗೆ ಬಾಕಿಯುಳಿದಿರುವ ಸೌಲಭ್ಯಗಳನ್ನು ನೀಡು ವಂತೆ ಮಾತ್ರ ಸೂಚಿಸಿರುವುದಾಗಿ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News