ಒಂದು ವಾರ 'ವರ್ಕ್ ಫ್ರಮ್ ಹೋಮ್' ನೀತಿ ಜಾರಿಗೊಳಿಸುವ ಬಗ್ಗೆ ಪರಿಗಣಿಸಿ: ದಿಲ್ಲಿ ಮಾಲಿನ್ಯದ ಕುರಿತು ಸುಪ್ರೀಂಕೋರ್ಟ್

Update: 2021-11-15 07:44 GMT

ಹೊಸದಿಲ್ಲಿ:  ದಿಲ್ಲಿಯ ಹದಗೆಡುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಮನೆಯಿಂದಲೇ ಕೆಲಸ- ವರ್ಕ್ ಫ್ರಮ್ ಹೋಂ ನೀತಿ ಜಾರಿಗೊಳಿಸುವ ಕುರಿತಂತೆ ಪರಿಶೀಲಿಸಬೇಕು ಎಂದು  ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಈ ಕುರಿತು ದಿಲ್ಲಿ ಸರಕಾರ ಹಾಗೂ ಎನ್‍ಸಿಆರ್ ಪ್ರಾಂತ್ಯದ ರಾಜ್ಯ ಸರಕಾರಗಳಾದ ಪಂಜಾಬ್ ಹರ್ಯಾಣ, ದಿಲ್ಲಿ ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆಯನ್ನು ಇಂದು ಮತ್ತು ನಾಳೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

ದಿಲ್ಲಿಯಲ್ಲಿ ಉದ್ಭವಿಸಿರುವ ವಿಪರೀತ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸೀಮಿತ ಪರಿಣಾಮ ಬೀರಬಹುದಾದ ಸಂಪೂರ್ಣ ಲಾಕ್‍ಡೌನ್‍ನಂತಹ ಕ್ರಮ ಕೈಗೊಳ್ಳಲು ತಾನು ಸಿದ್ಧ ಎಂದು ದಿಲ್ಲಿ ಸರಕಾರ ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ. ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಹದಗೆಡುತ್ತಿರುವುದರಿಂದ ಯಾವ ತುರ್ತು ಕ್ರಮಕೈಗೊಳ್ಳಲಿದ್ದೀರಿ ಎಂದು ನ್ಯಾಯಾಲಯ ಈ ಹಿಂದೆ ದಿಲ್ಲಿ ಸರಕಾರವನ್ನು ಪ್ರಶ್ನಿಸಿತ್ತು.

ದಿಲ್ಲಿಯ ವಾಯುಮಾಲಿನ್ಯ ಒಂದು 'ಬಿಕ್ಕಟ್ಟಿನ ಸ್ಥಿತಿ' ಎಂದು ಹೇಳಿದ ನ್ಯಾಯಾಧೀಶರು ಸರಕಾರ ಸುಮ್ಮನೆ ನೆಪಗಳನ್ನು ಒಡ್ಡಿ ಬೇರೆಯವರ ಮೇಲೆ ಗೂಬೆ ಕೂರಿಸುವ ಬದಲು ತುರ್ತು ಕ್ರಮಕೈಗೊಳ್ಳಬೇಕು, ಎಂದು ಇಂದಿನ ವಿಚಾರಣೆಯ ವೇಳೆ ಸೂಚಿಸಿದ್ದಾರೆ.

ಕೃಷಿ ತ್ಯಾಜ್ಯ ಸುಡುವುದರು ಶೇ 10ರಷ್ಟು  ಮಾಲಿನ್ಯಕ್ಕೆ ಮಾತ್ರ ಕಾರಣವಾಗುತ್ತಿದೆ ಎಂದು ಇಂದಿನ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ದಿಲ್ಲಿ ಸರಕಾರ ತನ್ನ ಅಫಿಡವಿಟ್‍ನಲ್ಲಿ  ಲಾಕ್‍ಡೌನ್ ಸೀಮಿತ ಪರಿಣಾಮ ಬೀರಬಹುದು ಹಾಗೂ ಇಂತಹುದೇ ಕ್ರಮ ದಿಲ್ಲಿಯ ಹೊರವಲಯಗಳಲ್ಲೂ ಕೈಗೊಳ್ಳಬೇಕಾದೀತು ಎಂದು ಹೇಳಿದೆ. ರಾಷ್ಟ್ರ ರಾಜಧಾನಿ ಪ್ರದೇಶ ಅಥವಾ ನ್ಯಾಷನಲ್ ಕ್ಯಾಪಿಟಲ್ ರೀಜನ್‍ನ ಸ್ಥಳಗಳಲ್ಲೂ ಇಂತಹುದೇ ಕ್ರಮಕ್ಕೆ ಕೇಂದ್ರ ಸರಕಾರ ಅಥವಾ ವಾಯುಗುಣಮಟ್ಟ ನಿರ್ವಹಣಾ ಆಯೋಗ ಕೈಗೊಳ್ಳಬೇಕು" ಎಂದು ದಿಲ್ಲಿ ಸರಕಾರ ಹೇಳಿದೆ.

ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News