ಪಾಕಿಸ್ತಾನದ ಐಎಸ್ಐಗೆ ಮಾಹಿತಿ ಸೋರಿಕೆ: ಯೋಧ ಗಣೇಶ್‌ ಪ್ರಸಾದ್ ಬಂಧನ‌

Update: 2021-11-15 15:32 GMT

ಪಾಟ್ನಾ,ನ.15: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಸೇನೆಯ ಯೋಧನೋರ್ವನನ್ನು ಬಂಧಿಸಲಾಗಿದೆ.

ಬಿಹಾರ ಪೊಲೀಸ್ ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ವು ರವಿವಾರ ಪಾಟ್ನಾದ ಖಗೌಲ್ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ಘಟಕದ ನೆರವಿನೊಂದಿಗೆ ಆರೋಪಿ ಗಣೇಶ ಪ್ರಸಾದನನ್ನು ಬಂಧಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಪ್ರಸಾದನನ್ನು ಪುಣೆಯಲ್ಲಿ ಸೇನೆಯ ಮೆಡಿಕಲ್ ಕಾರ್ಪ್ಸ್ನಲ್ಲಿ ನಿಯೋಜಿಸಲಾಗಿತ್ತು.

ಪ್ರಸಾದ ಜೋಧಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಐಎಸ್ಐನ ಮಹಿಳಾ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ ಮತ್ತು ‘ಹನಿಟ್ರಾಪ್ ’ನಲ್ಲಿ ಸಿಲುಕಿಸಲ್ಪಟ್ಟಿದ್ದ ಎಂದು ವರದಿಯು ತಿಳಿಸಿದೆ.

ವರದಿಯಂತೆ ಮಹಿಳೆಯು ಭಾರತೀಯ ನೌಕಾಪಡೆಯ ವ್ಯೆದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಪ್ರಸಾದ್ ಜೊತೆ ಸ್ನೇಹವನ್ನು ಬೆಳೆಸಿದ್ದಳು. ಸೇನಾ ಆಸ್ಪತ್ರೆಯೊಂದಿಗೆ ಸಂಯೋಜನೆಗೊಂಡಿರುವ ಘಟಕಗಳ ಸಂಖ್ಯೆ ಸೇರಿದಂತೆ ಮಾಹಿತಿಗಳನ್ನು ಮಹಿಳೆಯೊಂದಿಗೆ ಹಂಚಿಕೊಂಡಿದ್ದನ್ನು ಪ್ರಸಾದ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.

ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಸಾದ ವಿರುದ್ಧ ಪ್ರಕರಣ ದಾಖಲಾಗಿದ್ದು,ಖಗೌಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಯನ್ನು ನಡೆಸಲಾಗುತ್ತಿದೆ. ಪೊಲೀಸರು ಆತನ ಮೊಬೈಲ್ ಫೋನ್ ಅನ್ನೂ ವಶಪಡಿಸಿಕೊಂಡಿದ್ದು,ಆತ ಐಎಸ್ಐ ಏಜೆಂಟ್ ಜೊತೆ ಯಾವೆಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಲು ವಿಧಿವಿಜ್ಞಾನ ತಂಡವು ಅದನ್ನು ಪರಿಶೀಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News