ಮಹಾರಾಷ್ಟ್ರ ಹಿಂಸಾಚಾರ: ತಪ್ಪು ಮಾಹಿತಿ ಹರಡಿದ 36 ಸಾಮಾಜಿಕ ಮಾದ್ಯಮದ ಪೋಸ್ಟ್‌ಗಳನ್ನು ಪಟ್ಟಿ ಮಾಡಿದ ಸೈಬರ್ ಸೆಲ್

Update: 2021-11-17 17:41 GMT

ಮುಂಬೈ, ನ. 17: ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಇತ್ತೀಚೆಗೆ ಸಂಭವಿಸಿದ ಕೆಲವು ಹಿಂಸಾಚಾರದ ಘಟನೆಗಳಿಗೆ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೆಯಾದ ನಕಲಿ ಸುದ್ದಿಗಳು ಕಾರಣ ಎಂದು ಮಹಾರಾಷ್ಟ್ರ ಪೊಲೀಸ್‌ನ ಸೈಬರ್ ಸೆಲ್ ವಿಭಾಗ ಹೇಳಿದೆ.

ರಾಜ್ಯ ಗೃಹ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ಸೈಬರ್ ಸೆಲ್ ವಿಭಾಗ ಸಾಮಾಜಿಕ ಮಾಧ್ಯಮದ 36 ಪೋಸ್ಟ್‌ಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಟ್ವಿಟ್ಟರ್‌ನ 25, ಫೇಸ್‌ಬುಕ್‌ನ 6 ಹಾಗೂ ಇನ್‌ಸ್ಟಾಗ್ರಾಂನ 5 ಪೋಸ್ಟ್‌ಗಳು ಸೇರಿವೆ. ಈ ಪೋಸ್ಟ್‌ಗಳು ತಪ್ಪು ಮಾಹಿತಿ ಹರಡಿವೆ ಎಂದು ಅದು ಹೇಳಿದೆ. ತ್ರಿಪುರಾದಲ್ಲಿ ನಡೆದ ಕೋಮು ಹಿಂಸಾಚಾರದ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳು ಮಹಾರಾಷ್ಟ್ರದಲ್ಲಿ ನವೆಂಬರ್ 12ರಂದು ನಡೆಸಿದ ರ್ಯಾಲಿಯ ಸಂದರ್ಭ ಕಲ್ಲು ತೂರಾಟದ ಘಟನೆ ನಡೆದಿತ್ತು.

ಮುಖ್ಯವಾಗಿ ಅಮರಾವತಿ, ಮಾಲೆಗಾಂವ್ ಹಾಗೂ ನಾಂದೇಡ್ ನಗರದಲ್ಲಿ ಕಲ್ಲು ತೂರಾಟದ ಘಟನೆಗಳು ಸಂಭವಿಸಿದ್ದವು. ಮಾಲೆಗಾಂವ್‌ನಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ನಾಂದೇಡ್ ನಗರದಲ್ಲಿ 8 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಉದ್ರಿಕ್ತ ಗುಂಪು ನಾಲ್ಕು ವಾಹನಗಳಿಗೆ ಹಾನಿ ಉಂಟುಮಾಡಿತ್ತು. ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲು ಅಮರಾತಿಯ ಜಿಲ್ಲಾಧಿಕಾರಿ ಕಚೇರಿ ಹೊರಗೆ 8 ಸಾವಿರಕ್ಕೂ ಅಧಿಕ ಜನರು ಸೇರಿದ್ದರು.

ಮನವಿ ಸಲ್ಲಿಸಿ ಹಿಂದಿರುಗುವಾಗ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಾ ಚೌಕ್ ಹಾಗೂ ಕಾಟನ್ ಮಾರ್ಕೆಟ್ ನಡುವಿನ 3 ಸ್ಥಳಗಳಲ್ಲಿ ಕಲ್ಲು ತೂರಾಟದ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News