ರೋಹಿತ್ ಶರ್ಮಾ ಅವರ 9 ವರ್ಷದ ಹಳೆಯ ಟ್ವೀಟ್ ವೈರಲ್ : ಕಾರಣವೇನು ಗೊತ್ತಾ?

Update: 2021-11-18 09:26 GMT

ಮುಂಬೈ: ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ರೋಹಿತ್ ಶರ್ಮಾ ಅವರು ಪೂರ್ಣಾವಧಿಯ ಟ್ವೆಂಟಿ-20 ನಾಯಕರಾಗಿ ತಮ್ಮ ಹೊಸ ಇನಿಂಗ್ಸ್ ಆರಂಭಿಸಿದರು. ಇದೇ ವೇಳೆ  2012 ರಲ್ಲಿ ರೋಹಿತ್ ಮಾಡಿರುವ ಟ್ವೀಟ್ ವೊಂದು ವೈರಲ್ ಆಗಿದೆ.  

ರೋಹಿತ್  ಅವರು 2012 ರಲ್ಲಿ ಜೈಪುರದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈಯನ್ನು ಮುನ್ನಡೆಸುವ ತಮ್ಮ 'ಹೆಚ್ಚುವರಿ ಜವಾಬ್ದಾರಿ' ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು.

"ಜೈಪುರದ ನೆಲದಲ್ಲಿದ್ದೇನೆ.  ಹೌದು ನಾನು ತಂಡವನ್ನು ಮುನ್ನಡೆಸುತ್ತೇನೆ, ಹೆಚ್ಚುವರಿ ಜವಾಬ್ದಾರಿಯನ್ನು ಎದುರು ನೋಡುತ್ತಿದ್ದೇನೆ" ಎಂದು ರೋಹಿತ್ 9 ವರ್ಷಗಳ ಹಿಂದಿನ ಟ್ವೀಟ್ ನಲ್ಲಿ  ಬರೆದಿದ್ದಾರೆ.

ಬುಧವಾರ ಸಂಜೆ ಭಾರತವು ನ್ಯೂಝಿಲ್ಯಾಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ  ನವೆಂಬರ್ 7, 2012 ರ ಈ ಟ್ವೀಟ್  ಟ್ವಿಟರ್‌ ಪೋಸ್ಟ್ ನಲ್ಲಿ ಮತ್ತೆ ಕಾಣಿಸಿಕೊಂಡಿದೆ.

2012 ರ ರೋಹಿತ್ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿ ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, "ಮೊದಲ ಬಾರಿಗೆ ರೋಹಿತ್ ಶರ್ಮಾ ಮುಂಬೈ ತಂಡವನ್ನು ರಣಜಿ ಟ್ರೋಫಿಯಲ್ಲಿ ಮುನ್ನಡೆಸಿದ್ದು 2012 ರಲ್ಲಿ ಜೈಪುರದ ಕೆಎಲ್ ಸೈನಿ ಮೈದಾನದಲ್ಲಿ. ಇದೀಗ  ಮೊದಲ ಬಾರಿ ರೋಹಿತ್ ಶರ್ಮಾ ಭಾರತವನ್ನು ಪೂರ್ಣಕಾಲಿಕ ಟ್ವೆಂಟಿ-20 ನಾಯಕನಾಗಿ ಜೈಪುರದಲ್ಲಿ ಮುನ್ನಡೆಸಿದ್ದಾರೆ.

ರೋಹಿತ್ ತನ್ನ ಪೂರ್ಣಾವಧಿಯ ಟ್ವೆಂಟಿ-20 ನಾಯಕನಾಗಿ ಹಾಗೂ ರಾಹುಲ್ ದ್ರಾವಿಡ್ ಕೂಡ ಟೀಮ್ ಇಂಡಿಯಾದ ಮುಖ್ಯ ತರಬೇತುದಾರನಾಗಿ ತನ್ನ ಮೊದಲ ಪಂದ್ಯವನ್ನು ನಿರ್ವಹಿಸಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ ಇಬ್ಬರೂ ಶುಭಾರಂಭ ಮಾಡಿದ್ದಾರೆ.

ಶುಕ್ರವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News