ಷೇರುಪೇಟೆಗೆ ಪೇಟಿಎಂ ಪ್ರವೇಶ: ಮೊದಲ ದಿನವೇ ಷೇರಿನ ಮೌಲ್ಯ ಶೇ.27.40ರಷ್ಟು ಕುಸಿತ
ಹೊಸದಿಲ್ಲಿ,ನ.18: ಆನ್‌ಲೈನ್ ಪಾವತಿ ವೇದಿಕೆ ಪೇಟಿಎಂ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ಸ್ ಗುರುವಾರ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದು,ಮೊದಲ ದಿನವೇ ಷೇರಿನ ಮೌಲ್ಯ ಶೇ.27.40ರಷ್ಟು ಕುಸಿತವನ್ನು ಕಂಡಿದೆ.
ಇತ್ತೀಚಿಗಷ್ಟೇ ಐಪಿಒ ಮೂಲಕ ಹೂಡಿಕೆದಾರರಿಗೆ 2,150 ರೂ.ಬೆಲೆಯಲ್ಲಿ ವಿತರಣೆಯಾಗಿದ್ದ ಪೇಟಿಎಂ ಷೇರು ದಿನದ ವಹಿವಾಟು ಅಂತ್ಯಗೊಂಡಾಗ 1,560.80 ರೂ.ಗಳಲ್ಲಿ ಮುಕ್ತಾಯಗೊಂಡಿದೆ. ಹೂಡಿಕೆದಾರರು ಮೊದಲ ದಿನವೇ ಪ್ರತಿ ಷೇರಿನಲ್ಲಿ 589.20 ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ.
ಗುರುವಾರ ವಹಿವಾಟು ಆರಂಭಗೊಂಡಾಗ ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ 1995 ರೂ.ಗೆ ಲಿಸ್ಟ್ ಆದ ಶೇರು ಆಗಲೇ ಶೇ.9ರಷ್ಟು ಕುಸಿತವನ್ನು ದಾಖಲಿಸಿತ್ತು.
ನ.8ರಂದು ಪೇಟಿಎಂ ತನ್ನ 18,300 ಕೋ.ರೂ.ಗಳ ಐಪಿಒಗೆ ಚಾಲನೆ ನೀಡಿತ್ತು. ಇದು ಈವರೆಗಿನ ಭಾರತದ ಅತ್ಯಂತ ದೊಡ್ಡ ಐಪಿಒ ಆಗಿತ್ತು.
ಬಂಡವಾಳ ಮಾರುಕಟ್ಟೆಯಲ್ಲಿ ಪೇಟಿಎಂ ಸಾಧನೆಯ ಬಗ್ಗೆ ಮಾರುಕಟ್ಟೆ ತಜ್ಞರು ಆತಂಕವನ್ನು ವ್ಯಕ್ತಪಡಿಸಿದ್ದು,ಅದು ನಷ್ಟದಲ್ಲಿರುವ ಕಂಪನಿಯಾಗಿತ್ತು ಎಂದು ಹಲವರು ಬೆಟ್ಟು ಮಾಡಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ 1,701 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದ ಕಂಪನಿಯು ಮಾರಾಟ ಮತ್ತು ಜಾಹೀರಾತು ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ನಷ್ಟವನ್ನು ತುಂಬಿಕೊಂಡಿತ್ತು.