ಪಂಬಾದಲ್ಲಿ ರೆಡ್ ಅಲರ್ಟ್ : ಶಬರಿಮಲೆ ಯಾತ್ರೆ ರದ್ದು
ಪಟ್ಟಣಂತಿಟ್ಟ: ಭಾರಿ ಮಳೆಯ ಕಾರಣದಿಂದ ಕೇರಳದ ಹಲವು ನದಿಗಳು ಉಕ್ಕೇರಿ ಹರಿಯುತ್ತಿದ್ದು, ಪಟ್ಟಣಂತಿಟ್ಟ ಜಿಲ್ಲೆಯ ಐತಿಹಾಸಿಕ ಶಬರಿಮಲೆ ಬೆಟ್ಟದ ಪವಿತ್ರ ಮಂದಿರಕ್ಕೆ ಯಾತ್ರೆಯನ್ನು ರದ್ದುಪಡಿಸಲಾಗಿದೆ.
ಪಂಬಾ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಟ್ಟಣಂತಿಟ್ಟ ಜಿಲ್ಲಾಡಳಿತ ಶುಕ್ರವಾರ, ಯಾತ್ರೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಪವಿತ್ರ ನದಿ ಎಂದು ಪರಿಗಣಿಸಲಾಗಿರುವ ಪಂಬಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪಂಬಾ ಅಣೆಕಟ್ಟಿನ ಗೇಟುಗಳನ್ನು ತೆರೆದು ನೀರು ಹೊರಬಿಡಲಾಗಿದೆ. ಈ ಕಾರಣದಿಂದ ಕೆಳಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತರ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಕ್ಕಿ- ಅನಥೋಡ್ ಜಲಾಶಯದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಪಟ್ಟಣಂತಿಟ್ಟ ಜಿಲ್ಲಾಡಳಿತ ಹೇಳಿದೆ. ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪಂಬಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್.ಅಯ್ಯರ್ ಹೇಳಿದ್ದಾರೆ.
ವರ್ಚುವಲ್ ಸರದಿ ಮೂಲಕ ತಮ್ಮ ಸ್ಲಾಟ್‌ಗಳನ್ನು ಕಾಯ್ದಿಸಿಕೊಂಡಿದ್ದ ಯಾತ್ರಿಗಳಿಗೆ, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಆದಷ್ಟು ಶೀಘ್ರವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎರಡು ತಿಂಗಳ ಮಂಡಲಂ ಮತ್ತು ಮಕರವಿಳಕ್ಕು ಸೀಸನ್ ನವೆಂಬರ್ 16ರಂದು ಆರಂಭವಾದ ಹಿನ್ನೆಲೆಯಲ್ಲಿ ಪ್ರತಿಕೂಲ ಹವಾಮಾನ ಮತ್ತು ಕೋವಿಡ್-19 ಸ್ಥಿತಿಯ ನಡುವೆಯೂ ನೂರಾರು ಭಕ್ತರು ಅಯ್ಯಪ್ಪ ಮಂದಿರದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಚಾರಣ ಹೊರಟಿದ್ದಾರೆ.