ಖಾಸಗಿ ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಚಿಂತನೆ: ಮಾರುಕಟ್ಟೆಯಲ್ಲಿ ತಲ್ಲಣ

Update: 2021-11-24 01:50 GMT

ಹೊಸದಿಲ್ಲಿ: ದೇಶದಲ್ಲಿ ಎಲ್ಲ ಖಾಸಗಿ ಕ್ರಿಪ್ಟೊ ಕರೆನ್ಸಿಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಕ್ರಿಪ್ಟೊ ಮಾರುಕಟ್ಟೆ ಮಹಾನ್ ಕುಸಿತ ಕಂಡಿದೆ.

ನವೆಂಬರ್ 23ರಂದು ರಾತ್ರಿ 11.15ಕ್ಕೆ ಇದ್ದಂತೆ ಎಲ್ಲ ಪ್ರಮುಖ ಕ್ರಿಪ್ಟೊ ಕರೆನ್ಸಿಗಳು ಶೇಕಡ 15 ಅಥವಾ ಅಧಿಕ ಮೌಲ್ಯ ಕಳೆದುಕೊಂಡಿವೆ. ಬಿಟ್‌ಕಾಯಿನ್ ಬೆಲೆ ಶೇಕಡ 17 ರಷ್ಟು ಕುಸಿತ ಕಂಡಿದ್ದರೆ, ಎಥೆರಿಯಂ ಶೇಕಡ 15ರಷ್ಟು ಕುಸಿತ ಕಂಡಿದೆ. ತೆಥರ್ ಶೇಕಡ 18ರಷ್ಟು ಕುಸಿತ ದಾಖಲಿಸಿದೆ.

ಕ್ರಿಪ್ಟೊಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ-2021ಕ್ಕೆ ಸಂಬಂಧಿಸಿದಂತೆ ದೊರಕಿದ ಅಧಿಕೃತ ದಾಖಲೆಗಳ ಪ್ರಕಾರ, ನವೆಂಬರ್ 29ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಉದ್ದೇಶಿಸಲಾಗಿದೆ. ಈ ಮಸೂದೆ ಭಾರತದಲ್ಲಿ ಎಲ್ಲ ಖಾಸಗಿ ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸಲಿದೆ. ಚಳಿಗಾಲದ ಅಧಿವೇಶನದಲ್ಲೇ ಇದನ್ನು ಚರ್ಚೆಗೆ ಕೈಗೆತ್ತಿಕೊಂಡು ಆಂಗೀಕರಿಸುವ ಸಾಧ್ಯತೆ ಇದೆ.

ಭಾರತದ ರಿಸರ್ವ್ ಬ್ಯಾಂಕ್ ತನ್ನದೇ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ. "ಆರ್‌ಬಿಐನಿಂದ ಅಧಿಕೃತ ಡಿಜಿಟಲ್ ಕರೆನ್ಸಿಯ ಸೃಷ್ಟಿ ಮತ್ತು ಬಿಡುಗಡೆಗೆ ಅನುವು ಮಾಡಿಕೊಡುವ ಚೌಕಟ್ಟನ್ನು ಸೃಷ್ಟಿಸುವುದು ಇದರ ಉದ್ದೇಶ" ಎಂದು ಹೇಳಿದೆ.

ಹೂಡಿಕೆದಾರರ ಹಣದ ಭದ್ರತೆ ಮತ್ತು ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ತಪ್ಪುದಾರಿಗೆ ಎಳೆಯುವಂಥ ಜಾಹೀರಾತುಗಳು ಆತಂಕಕಾರಿ ಬೆಳವಣಿಗೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News