ಮಾಲೆಗಾಂವ್ ಸ್ಫೋಟ ಪ್ರಕರಣ: ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಮುಂಬೈ ನ್ಯಾಯಾಲಯಕ್ಕೆ ಹಾಜರು
Update: 2021-11-24 15:35 IST
ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇಂದು ಮುಂಬೈನ ವಿಶೇಷ ಎನ್ ಐಎ ನ್ಯಾಯಾಲಯಕ್ಕೆ ಹಾಜರಾದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಪಿ.ಆರ್.ಸಿತ್ರೆ ಅವರ ಮುಂದೆ ಠಾಕೂರ್ ಹಾಜರಾದರು.
ನ್ಯಾಯಾಲಯವು ಸಂಸದೆಗೆ ಸಮನ್ಸ್ ನೀಡದಿದ್ದರೂ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈನಲ್ಲಿದ್ದ ಕಾರಣ ಅವರು ಸ್ವತಃ ಹಾಜರಾಗಿದ್ದಾರೆ ಎಂದು ಠಾಕೂರ್ ಪರ ವಕೀಲರು ಹೇಳಿದರು.
ಬಿಜೆಪಿ ನಾಯಕಿ ಈ ವರ್ಷದ ಜನವರಿಯಲ್ಲಿ ಈ ಪ್ರಕರಣದಲ್ಲಿ ಕೊನೆಯದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಪ್ರಜ್ಞಾ ಠಾಕೂರ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.