ಚೀನಾ, ಪಾಕಿಸ್ತಾನದ ನಡುವಿನ ರಕ್ಷಣಾ ಸಹಕಾರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ : ನೌಕಾ ಪಡೆ ವರಿಷ್ಠ

Update: 2021-11-25 18:30 GMT

ಮುಂಬೈ, ನ. 25: ಚೀನಾ ಹಾಗೂ ಪಾಕಿಸ್ತಾನ ನಡುವಿನ ರಕ್ಷಣಾ ಸಹಕಾರವನ್ನು ಭಾರತ ಸೂಕ್ಷವಾಗಿ ಗಮನಿಸುತ್ತಿದೆ ಎಂದು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಮುಂಬೈಯ ನೌಕಾ ಪಡೆಯ ದಕ್ಕೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಾಲ್ಕನೇ ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿ ‘ಐಎನ್‌ಎಸ್ ವೇಲಾ’ವನ್ನು ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಳಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘‘ಚೀನಾ ಹಾಗೂ ಪಾಕಿಸ್ತಾನದ ನಡುವಿನ ಸೇನಾ ಸಹಕಾರವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಚೀನಾದಿಂದ ಪಾಕಿಸ್ತಾನದ ಇತ್ತೀಚೆಗಿನ ಖರೀದಿ ಪರಿಸ್ಥಿತಿಯನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಎದುರಾಗುವ ಸವಾಲನ್ನು ಎದುರಿಸಲು ಭಾರತ ಸನ್ನದ್ದವಾಗಬೇಕಾಗಿದೆ’’’ ಎಂದರು. ಇತ್ತೀಚೆಗೆ ಪಾಕಿಸ್ತಾನ ಹಾಗೂ ಚೀನಾ ನೂತನ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿವೆ.

ಇದು ಹೊಸ ಪರಮಾಣು ಸ್ಪರ್ಧೆ ಹಾಗೂ ಸಂಘರ್ಷದತ್ತ ಜಗತ್ತನ್ನು ದೂಡಲಿದೆ ಎಂದು ಅವರು ಹೇಳಿದ್ದಾರೆ. ಪರಮಾಣು ಇಂಧನ ಸಹಕಾರವನ್ನು ತೀವ್ರಗೊಳಿಸುವ ಒಡಂಬಡಿಕೆಗೆ ಪಾಕಿಸ್ತಾನ ಅಟೋಮಿಕ್ ಎನರ್ಜಿ ಕಮಿಷನ್ (ಪಿಎಇಸಿ) ಹಾಗೂ ಚೀನಾ ರೊಂಗ್ಯೂನ್ ಎಂಜಿನಿಯರಿಂಗ್ ಕೋಆಪರೇಶನ್ 2021 ಸೆಪ್ಟಂಬರ್ 8ರಂದು ಸಹಿ ಹಾಕಿವೆ. 2021 ಆಗಸ್ಟ್ 20ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮಗೊಳಿಸಲಾದ ಈ ಒಪ್ಪಂದಕ್ಕೆ ಆನ್‌ಲೈನ್ ಮೂಲಕ ಸಹಿ ಹಾಕಲಾಗಿತ್ತು ಹಾಗೂ ಈ ಒಪ್ಪಂದ 10 ವರ್ಷಗಳ ವರೆಗೆ ಮಾನ್ಯತೆ ಇರಲಿದೆ. ಈ ಒಪ್ಪಂದ ಪರಮಾಣು ತಂತ್ರಜ್ಞಾನ ವರ್ಗಾವಣೆ, ಯುರೇನಿಯಂ ಗಣಿಗಾರಿಕೆ ಹಾಗೂ ಪರಿಷ್ಕರಣೆ, ಪರಮಾಣು ಇಂದನ ಪೂರೈಕೆ ಹಾಗೂ ಸಂಶೋಧನಾ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಿದೆ. ಇದು ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಹೆಚ್ಚಿಸಲು ನೆರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News