ಮುಂಬೈ ಭಯೋತ್ಪಾದಕ ದಾಳಿ: ಇಬ್ಬಗೆ ನಿಲುವನ್ನು ತೊರೆಯುವಂತೆ ಪಾಕಿಸ್ತಾನಕ್ಕೆ ಭಾರತದ ತಾಕೀತು

Update: 2021-11-26 14:15 GMT
file photo:PTI

ಹೊಸದಿಲ್ಲಿ,ನ.26: ಮುಂಬೈ ಭಯೋತ್ಪಾದಕ ದಾಳಿಗಳು ಮಾಡಿರುವ ಗಾಯಗಳನ್ನು ಭಾರತವು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

26/11ರ ವರ್ಷಾಚರಣೆಯ ಅಂಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಡುಗಡೆಗೊಳಿಸಿದ ವೀಡಿಯೊ ಸಂದೇಶದಲ್ಲಿ,ಭಯೋತ್ಪಾದಕರ ಗುಂಡುಗಳಿಗೆ ಬಲಿಯಾದ ನಾಗರಿಕರು ಮತ್ತು ಪೊಲೀಸರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿರುವ ಪ್ರಧಾನಿ ಮೋದಿ, ಇಂದಿನ ಭಾರತವು ಹೊಸ ನೀತಿ ಮತ್ತು ಹೊಸ ವಿಧಾನಗಳೊಂದಿಗೆ ಭೀತಿವಾದದ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಲು ಪಾಕ್ ರಾಯಭಾರಿ ಕಚೇರಿಯ ಹಿರಿಯ ರಾಜತಾಂತ್ರಿಕರೋರ್ವರನ್ನು ಕರೆಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಲಿಖಿತ ಟಿಪ್ಪಣಿಯೊಂದನ್ನು ಅವರಿಗೆ ಹಸ್ತಾಂತರಿಸಿತು. ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳಿಗೆ ತನ್ನ ನೆಲದ ಬಳಕೆಗೆ ಅವಕಾಶ ನೀಡದಿರುವ ತನ್ನ ಬದ್ಧತೆಯನ್ನು ಕಾಯ್ದುಕೊಳ್ಳುವಂತೆ ಅದು ಪಾಕಿಸ್ತಾನಕ್ಕೆ ಸೂಚಿಸಿದೆ.

ಈ ಘೋರ ದಾಳಿಗಳು ನಡೆದು 13 ವರ್ಷಗಳ ಬಳಿಕವೂ 15ದೇಶಗಳ 166 ಮೃತರ ಕುಟುಂಬಗಳು ಪ್ರಕರಣದ ಅಂತ್ಯಕ್ಕಾಗಿ ಈಗಲೂ ಕಾಯುತ್ತಿರುವುದು ಅತ್ಯಂತ ಕಳವಳದ ವಿಷಯವಾಗಿದೆ. ದಾಳಿಯ ರೂವಾರಿಗಳನ್ನು ಕಾನೂನಿನ ಶಿಕ್ಷೆಗೊಳಪಡಿಸಲು ಅಗತ್ಯ ಪ್ರಾಮಾಣಿಕತೆಯನ್ನು ಪಾಕಿಸ್ತಾನವು ತೋರಿಸುತ್ತಿಲ್ಲ ಎಂದು ಹೇಳಿರುವ ಸಚಿವಾಲಯವು,ಇಬ್ಬಗೆ ನಿಲುವನ್ನು ತೊರೆಯುವಂತೆ ಮತ್ತು ಭೀಕರ ದಾಳಿಗಳ ರೂವಾರಿಗಳನ್ನು ತ್ವರಿತವಾಗಿ ಶಿಕ್ಷೆಗೆ ಗುರಿಪಡಿಸುವಂತೆ ನಾವು ಮತ್ತೊಮ್ಮೆ ಪಾಕ್ ಸರಕಾರಕ್ಕೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದೆ.

ಇದು ಭಯೋತ್ಪಾದಕರಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ಪಾಕಿಸ್ತಾನದ ಉತ್ತರದಾಯಿತ್ವದ ವಿಷಯ ಮಾತ್ರವಲ್ಲ,ಅಂತರರಾಷ್ಟ್ರೀಯ ಬದ್ಧತೆಯೂ ಆಗಿದೆ ಎಂದು ತಿಳಿಸಿರುವ ಸಚಿವಾಲಯವು,ದಾಳಿಯ ಬಲಿಪಶುಗಳು ಮತ್ತು ಹುತಾತ್ಮರ ಕುಟುಂಬಗಳಿಗೆ ನ್ಯಾಯಕ್ಕಾಗಿ ಪ್ರತಿಯೊಂದೂ ಪ್ರಯತ್ನವನ್ನು ಭಾರತವು ಮುಂದುವರಿಸಲಿದೆ ಎಂದು ಹೇಳಿದೆ.

2008,ನ.26ರಂದು ಮುಂಬೈನ ಹಲವು ಕಡೆಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದ್ದ ಹತ್ತು ಪಾಕಿಸ್ತಾನಿ ಭಯೋತ್ಪಾದಕರ ಗುಂಪು 166 ಜನರನ್ನು ಬಲಿ ತೆಗೆದುಕೊಂಡಿತ್ತು. ಬದುಕುಳಿದಿದ್ದ ಏಕೈಕ ಪಾಕ್ ಭಯೋತ್ಪಾದಕ ಅಜ್ಮಲ್ ಅಮಿರ್ ಕಸಬ್‌ನನ್ನು 2012 ನವಂಬರ್‌ನಲ್ಲಿ ಪುಣೆಯ ಯೆರವಾಡಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News