"ಬಹುಶಃ ಇದು ಕೊನೆ": ಬೆಂಗಳೂರು ಕಾರ್ಯಕ್ರಮ ರದ್ದಾದ ಬಳಿಕ ಮುನವ್ವರ್ ಫಾರೂಕಿ ಹೇಳಿದ್ದೇನು?

Update: 2021-11-28 09:37 GMT
ಮುನವ್ವರ್ ಫಾರೂಕಿ (Twitter/Munawar Faruqui)

ಬೆಂಗಳೂರು: ಖ್ಯಾತ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮ ನಡೆಯುವ ಸಭಾಗೃಹಕ್ಕೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ರವಿವಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿದ ಬೆನ್ನಲ್ಲೇ ಫಾರೂಕಿ ಭಾವುಕರಾಗಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಪೊಲೀಸರು ಗುಡ್ ಶೆಪರ್ಡ್ ಆಡಿಟೋರಿಯಂ ವ್ಯವಸ್ಥಾಪಕರಗೆ ಪತ್ರ ಬರೆದು, ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ರವಿವಾರ ಸಂಜೆ ನಡೆಯಬೇಕಿದ್ದ ಕಾರ್ಯಕ್ರಮ ರದ್ದುಪಡಿಸುವಂತೆ ಸೂಚಿಸಿದ್ದಾರೆ. ಗುಜರಾತ್ ಮೂಲದ ಕಲಾವಿದರಾಗಿರುವ ಮುನವ್ವರ್ ಅವರ ಹಲವು ಕಾರ್ಯಕ್ರಮಗಳು 2021ರ ಜನವರಿಯಲ್ಲಿ ಬಿಜೆಪಿ ಶಾಸಕನ ಪುತ್ರ ದೂರು ನೀಡಿದ ಬಳಿಕ ಕೊನೆಕ್ಷಣದಲ್ಲಿ ರದ್ದಾಗಿವೆ. ಮುನವ್ವರ್ ಸಿಡಿಸುವ ನಗೆ ಚಟಾಕಿಗಳು ಮನ ನೋಯಿಸುವಂತಿರುತ್ತವೆ ಎಂದು ದೂರು ನೀಡಲಾಗಿತ್ತು.

"ಬಹುಶಃ ಇದು ಕೊನೆ ಎಂದು ನಾನು ಭಾವಿಸಿದ್ದೇನೆ. ನನ್ನ ಹೆಸರು ಮುನವ್ವರ್ ಫಾರೂಕಿ. ನೀವು ಅದ್ಭುತ ಪ್ರೇಕ್ಷಕರು. ಎಲ್ಲರಿಗೂ ವಿದಾಯ!" ಎಂದು ಇನ್‌ಸ್ಟಾಗ್ರಾಂನದಲ್ಲಿ ಪೋಸ್ಟ್ ಮಾಡಿದ್ದಾರೆ.

"ನಾನು ಮಾಡದ ಜೋಕ್‌ಗಾಗಿ ನನ್ನನ್ನು ಜೈಲಿಗೆ ಕಳುಹಿಸಿದಲ್ಲಿಂದು ಹಿಡಿದು, ಯಾವುದೇ ಸಮಸ್ಯೆ ಇಲ್ಲದಿದ್ದರೂ ನನ್ನ ಕಾರ್ಯಕ್ರಮಗಳನ್ನು ರದ್ದು ಮಾಡುವವರೆಗೆ ಇದು ಅನ್ಯಾಯ. ಈ ಕಾರ್ಯಕ್ರಮ ಯಾವುದೇ ಧರ್ಮದವರಾದರೂ ಎಲ್ಲ ಭಾರತೀಯರ ಅಪಾರ ಪ್ರೀತಿ ಪಡೆದಿತ್ತು. ಇದು ನ್ಯಾಯಸಮ್ಮತವಲ್ಲ" ಎಂದು ಮುನವ್ವರ್ ಬರೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಸೆನ್ಸಾರ್ ಪ್ರಮಾಣಪತ್ರವನ್ನು ಕೂಡಾ ಪಡೆದಿದ್ದಾಗಿ ಅವರು ವಿವರಿಸಿದ್ದಾರೆ. "ಸ್ಪಷ್ಟವಾಗಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವ ಸಮಸ್ಯೆಯೂ ಇಲ್ಲ!" ಕಳೆದ ಎರಡು ತಿಂಗಳಲ್ಲಿ ಸಂಘಟಕರಿಗೆ ಮತ್ತು ಪ್ರೇಕ್ಷಕರಿಗೆ ಬಂದ ಇಂಥದ್ದೇ ಬೆದರಿಕೆಯಿಂದಾಗಿ 12 ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಮುನವ್ವರ್  ಹೇಳಿದ್ದಾರೆ.

ನವೆಂಬರ್ 28ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಒಂದು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು. ದಿವಂಗದ ಪುನೀತ್ ರಾಜ್‌ಕುಮಾರ್ ಅವರು ನಡೆಸುತ್ತಿದ್ದ ಸಂಘಟನೆಯನ್ನು ಸಂಪರ್ಕಿಸಿ, ದತ್ತಿ ಕಾರ್ಯಕ್ಕಾಗಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದನ್ನು ದತ್ತಿ ನೆರವಿನ ಕಾರ್ಯಕ್ರಮ ಎಂದು ಬಿಂಬಿಸಬಾರದು ಎಂದು ಹಲವು ಮಂದಿ ಸಂಘಟಕರು ವಿನಂತಿಸಿದ್ದರಿಂದ ಹಾಗೆ ಪ್ರಚಾರ ಮಾಡಿರಲಿಲ್ಲ. 2021ರ ಜನವರಿಯಲ್ಲಿ ಬಂಧನಕ್ಕೆ ಒಳಗಾದ ಬಳಿಕ ಹಲವು ಸಂಘಟನೆಗಳು ಹೇಗೆ ಕಾರ್ಯಕ್ರಮ ರದ್ದುಪಡಿಸಿವೆ ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News