​ತಮಿಳುನಾಡಿನ ವೆಲ್ಲೂರು ಬಳಿ ಭೂಕಂಪ

Update: 2021-11-29 01:33 GMT

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಬಳಿ ಸೋಮವಾರ ನಸುಕಿನ ವೇಳೆಗೆ ಸಾಧಾರಣ ಪ್ರಮಾಣದ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.6ರಷ್ಟಿತ್ತು ಎಂದು ತಿಳಿದುಬಂದಿದೆ.

ತಮಿಳುನಾಡಿನ ವೆಲ್ಲೂರಿನಿಂದ ನೈರುತ್ಯಕ್ಕೆ 59 ಕಿಲೋಮೀಟರ್ ದೂರದಲ್ಲಿ ಮುಂಜಾನೆ 4.17ಕ್ಕೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ತಕ್ಷಣಕ್ಕೆ ಯಾವುದೇ ಆಸ್ತಿ ಪಾಸ್ತಿ ನಷ್ಟ ಅಥವಾ ಜೀವಹಾನಿಯಾದ ಘಟನೆಗಳು ವರದಿಯಾಗಿಲ್ಲ.

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಪ್ರಕಾರ, ಈ ಭೂಕಂಪದ ಕೇಂದ್ರ ಬಿಂದು ವೆಲ್ಲೂರು ಜಿಲ್ಲೆಯಲ್ಲಿದ್ದು, ಸುಮಾರು 25 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ಏತನ್ಮಧ್ಯೆ ವೆಲ್ಲೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ಕಟ್ಟುನಿಟ್ಟಿನ ಮುಂಜಾಗ್ರತೆ ವಹಿಸಲಾಗಿದೆ. ಪಾಲಾರ್ ನದಿಯನ್ನು ದಾಟದಂತೆ ನಿಷೇಧ ವಿಧಿಸಲಾಗಿದ್ದು, ರಾಣಿಪೇಟೆ ಮತ್ತು ತಿರಪತ್ತೂರು ಜಿಲ್ಲೆಗಳಲ್ಲಿ ಚೆಕ್‌ ಡ್ಯಾಂಗಳು ಹಾಗೂ ತಗ್ಗು ಪ್ರದೇಶದಲ್ಲಿ ಸೇತುವೆಗಳನ್ನು ದಾಟದಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News