ರಿಲಯನ್ಸ್ ಕ್ಯಾಪಿಟಲ್ ನಿರ್ದೇಶಕ ಮಂಡಳಿಯನ್ನು ತನ್ನ ವಶಕ್ಕೆ ಪಡೆದುಕೊಂಡ ರಿಸರ್ವ್ ಬ್ಯಾಂಕ್: ವರದಿ

Update: 2021-11-29 14:45 GMT
file photo (Anil Ambani)

 ಹೊಸದಿಲ್ಲಿ: ಇಂದು ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಆರ್ಥಿಕ ಮುಗ್ಗಟ್ಟಿನಲ್ಲಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆಯ ನಿರ್ದೇಶಕ ಮಂಡಳಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಶಕ್ಕೆ ಪಡೆದುಕೊಂಡಿದೆ. ಸಾಲ ಮರುಪಾವತಿ ಸಮಸ್ಯೆ ಹಾಗೂ 'ಗಂಭೀರ ಆಡಳಿತಾತ್ಮಕ ಸಮಸ್ಯೆಗಳ' ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಆರ್ ಬಿ ಐ ಹೇಳಿದೆ ಎಂದು thewire.in ವರದಿ ಮಾಡಿದೆ.

ಈ ಕುರಿತು ಆರ್ ಬಿ ಐ ಒಂದು ಸಣ್ಣ ಹೇಳಿಕೆಯನ್ನೂ ಬಿಡುಗಡೆಗೊಳಿಸಿದೆ. ಗಂಭೀರ ಆಡಳಿತಾತ್ಮಕ ಸಮಸ್ಯೆಗಳನ್ನು ಕಂಪೆನಿಯ ನಿರ್ದೇಶಕ ಮಂಡಳಿ ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂದು ಅದರಲ್ಲಿ ಹೇಳಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ ಅವರನ್ನು ಕಂಪೆನಿಯ ಆಡಳಿತಾಧಿಕಾರಿಯನ್ನಾಗಿ ಆರ್ ಬಿ ಐ ಕಾಯಿದೆ ಇದರ ಸೆಕ್ಷನ್ 45- Iಇ (2) ಅನ್ವಯ ನೇಮಕಗೊಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

"ಸಾಲ ನೀಡಿದ ಹಲವರಿಗೆ ಸಾಲ ಮರುಪಾವತಿಸಲು ವಿಫಲವಾಗಿದ್ದಕ್ಕೆ ಹಾಗೂ ನಿರ್ದೇಶಕ ಮಂಡಳಿ ಸೂಕ್ತವಾಗಿ ಪರಿಹರಿಸದೇ ಇರುವ ಆಡಳಿತಾತ್ಮಕ ವಿಚಾರಗಳನ್ನು ಪರಿಗಣಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆ, 1934 ಇದರ ಸೆಕ್ಷನ್ 45- Iಇ(1) ಅಡಿಯಲ್ಲಿ ಪ್ರದತ್ತ ಅಧಿಕಾರಗಳನ್ನು ಚಲಾಯಿಸಿ ರಿಸರ್ವ್ ಬ್ಯಾಂಕ್ ಇಂದು ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಇದರ ನಿರ್ದೇಶಕ ಮಂಡಳಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ,'' ಎಂದು ಆರ್ ಬಿ ಐ ಹೇಳಿಕೆ ತಿಳಿಸಿದೆ ಎಂದು ವರದಿಯಾಗಿದೆ.

"ಇನ್‍ಸಾಲ್ವೆನ್ಸಿ ಎಂಡ್ ಬ್ಯಾಂಕ್ರಪ್ಟ್ಸಿ (ಇನ್ಸಾಲ್ವೆನ್ಸಿ ಎಂಡ್ ಲಿಕ್ವಿಡೇಶನ್ ಪ್ರೊಸೀಡಿಂಗ್ಸ್ ಆಫ್ ಫಿನಾನ್ಶಿಯಲ್ ಸರ್ವಿಸ್ ಪ್ರೊವೈಡರ್ಸ್ ಎಂಡ್ ಅಪ್ಲಿಕೇಶನ್ ಟು ಅಡ್ಜುಡಿಕೇಟಿಂಗ್ ಅಥಾರಿಟಿ) ರೂಲ್ಸ್ 2019 ಅನ್ವಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ  ಸೂಕ್ತ ಕ್ರಮಕೈಗೊಳ್ಳಿದೆ,'' ಎಂದು ಹೇಳಿಕೆ ತಿಳಿಸಿದೆ.

ಕಂಪೆನಿಯ ದಿವಾಳಿತನ ಘೋಷಣೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಗಾಗಿ ಆಡಳಿತಾಧಿಕಾರಿಯನ್ನು ಇನ್ಸಾಲ್ವೆನ್ಸಿ ರಿಸೊಲ್ಯೂಶನ್ ಪ್ರೊಫೆಶನಲ್ ಆಗಿ ನೇಮಕಗೊಳಿಸುವಂತೆ  ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‍ನ ಮುಂಬೈ ಪೀಠಕ್ಕೆ ಆರ್‍ಬಿಐ ಅರ್ಜಿ ಸಲ್ಲಿಸಲಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News