ಎಲ್ಗಾರ್ ಪರಿಷದ್ ಪ್ರಕರಣ: ಸುಧಾ ಭಾರದ್ವಾಜ್‌ಗೆ ಜಾಮೀನು ಮಂಜೂರು

Update: 2021-12-01 15:27 GMT
ಸುಧಾ ಭಾರದ್ವಾಜ್‌ (Photo: PTI)

ಮುಂಬೈ,ಡಿ.1: ದೋಷಾರೋಪಣ ಪಟ್ಟಿ ಸಲ್ಲಿಕೆಯಲ್ಲಿ ವಿಳಂಬದ ಹಿನ್ನೆಲೆಯಲ್ಲಿ ಡಿಫಾಲ್ಟ್ ಜಾಮೀನನ್ನು ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್ ಅವರಿಗೆ ಮುಂಬೈ ಉಚ್ಚ ನ್ಯಾಯಾಲಯವು ಬುಧವಾರ ಮಂಜೂರು ಮಾಡಿದೆ. ಆದರೆ ಇದೇ ಕಾರಣವನ್ನು ನೀಡಿ ಪ್ರಕರಣದ ಇತರ ಎಂಟು ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ಅದು ತಿರಸ್ಕರಿಸಿದೆ.

 ಸುಧೀರ ಧವಳೆ,ಪಿ.ವರವರ ರಾವ್,ರೋನಾ ವಿಲ್ಸನ್,ಸುರೇಂದ್ರ ಗಡ್ಲಿಂಗ್,ಶೋಮಾ ಸೇನ್,ಮಹೇಶ ರಾವುತ್,ವರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ ಫೆರಿರಾ ಅವರು ಪ್ರಕರಣದಲ್ಲಿಯ ಇತರ ಎಂಟು ಆರೋಪಿಗಳಾಗಿದ್ದಾರೆ.

ಜಾಮೀನು ಷರತ್ತುಗಳನ್ನು ನಿರ್ಧರಿಸಲು ಭಾರದ್ವಾಜ್ ಅವರನ್ನು ಡಿ.8ರಂದು ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಎನ್.ಜೆ.ಜಾಮ್ದಾರ್ ಅವರ ಪೀಠವು ನಿರ್ದೇಶ ನೀಡಿತು.

ಬಂಧನದ 90 ದಿನಗಳ ಅವಧಿ (ಗೃಹಬಂಧನದ ಅವಧಿಯನ್ನು ಹೊರತುಪಡಿಸಿ)ಯು 2019 ಜನವರಿ 25ಕ್ಕೆ ಅಂತ್ಯಗೊಂಡಿತ್ತು,ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿರಲಿಲ್ಲ, ಬಂಧನದ ಅವಧಿಯ ವಿಸ್ತರಣೆಗೆ ಯಾವುದೇ ಕಾನೂನಾತ್ಮಕ ಆದೇಶವಿರಲಿಲ್ಲ ಮತ್ತು ಡಿಫಾಲ್ಟ್ ಜಾಮೀನು ಕೋರಿ ಭಾರದ್ವಾಜ್ ಸಲ್ಲಿಸಿದ್ದ ಅರ್ಜಿಯು ತೀರ್ಮಾನಕ್ಕಾಗಿ ಕಾಯುತ್ತಿತ್ತು;ಇವು ಈವರೆಗೆ ಭಾರದ್ವಾಜ್ ಅವರ ಅರ್ಜಿಯಿಂದ ಹೊರಹೊಮ್ಮಿರುವ ಕಟು ವಾಸ್ತವಗಳಾಗಿವೆ.

ಹೆಚ್ಚುವರಿ ನ್ಯಾಯಾಧೀಶರು ಬಂಧನದ ಅವಧಿಯನ್ನು 90 ದಿನಗಳ ಕಾಲ ವಿಸ್ತರಿಸಿದ್ದರಿಂದ ಭಾರದ್ವಾಜ್ 2019,ಜ.25ರ ನಂತರ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗುವವರೆಗೆ ಡಿಫಾಲ್ಟ್ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸದ್ರಿ ಅವಧಿಯಲ್ಲಿ ಭಾರದ್ವಾಜ್ ಅರ್ಜಿಯನ್ನು ಸಲ್ಲಿಸಿರಲಿಲ್ಲ ಮತ್ತು ಅವರು ಡಿಫಾಲ್ಟ್ ಜಾಮೀನಿನ ಹಕ್ಕನ್ನು ಪಡೆದಿರಲಿಲ್ಲ ಎಂದು ಆಗ್ರಹಪೂರ್ವಕವಾಗಿ ಹೇಳಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿತು.

ಜಾಮೀನು ಅರ್ಜಿಗಳು ತಿರಸ್ಕೃತಗೊಂಡ ಇತರರ ಕುರಿತಂತೆ ನ್ಯಾಯಾಲಯವು,ಆರೋಪಿಗಳಿಗೆ ಡಿಫಾಲ್ಟ್ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಹಕ್ಕು ಇದ್ದಾಗ ಅವರು ಅದನ್ನು ಮಾಡಿರಲಿಲ್ಲ ಮತ್ತು ನಂತರ ನ್ಯಾಯಾಲಯದಲ್ಲಿ ಅವರ ವಿರುದ್ಧ ದೋಷಾರೋಪಣ ಪಟ್ಟಿಗಳು ಸಲ್ಲಿಕೆಯಾಗಿವೆ ಎಂದು ಹೇಳಿತು.

ಧವಳೆ,ವಿಲ್ಸನ್,ಗಡ್ಲಿಂಗ್,ಸೇನ್ ಮತ್ತು ರಾವುತ್ ಪ್ರಕರಣದಲ್ಲಿ ನ್ಯಾಯಾಲಯವು,ಕಾನೂನಾತ್ಮಕ ಅಂಶ ಅಥವಾ ಬಂಧನದ ಅವಧಿಯ ವಿಸ್ತರಣೆಯು ಅಪ್ರಸ್ತುತವಾಗಿದೆ,ಏಕೆಂದರೆ ಅರ್ಜಿದಾರರು ತಮ್ಮ ವಿರುದ್ಧ ದೋಷಾರೋಪಣೆ ಪಟ್ಟಿ 2018,ನ.15ಕ್ಕೆ ದಾಖಲಾಗುವ ಮುನ್ನ ಡಿಫಾಲ್ಟ್ ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಹಕ್ಕನ್ನು ಬಳಸಿಕೊಂಡಿರಲಿಲ್ಲ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News