ಕರ್ತಾರ್‌ಪುರ ಗುರುದ್ವಾರದಲ್ಲಿ ಫೋಟೋಶೂಟ್ ವಿವಾದ: ಪಾಕಿಸ್ತಾನದ ರಾಯಭಾರಿಗೆ ಭಾರತ ಸಮನ್ಸ್
ಹೊಸದಿಲ್ಲಿ: ಕರ್ತಾರ್‌ಪುರ ಗುರುದ್ವಾರದಲ್ಲಿ ಪಾಕಿಸ್ತಾನದ ಮಾಡೆಲ್ ಒಬ್ಬರು ಫೋಟೋ ಶೂಟ್‌ನಲ್ಲಿ ಬರಿತಲೆಯೊಂದಿಗೆ ಪೋಸ್ ನೀಡಿದ ನಂತರ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನ 'ಪಾವಿತ್ರ್ಯತೆಯ ಅಪವಿತ್ರ'ದ ಬಗ್ಗೆ ಕಳವಳ ವ್ಯಕ್ತಪಡಿಸಲು ಭಾರತವು ಮಂಗಳವಾರ ದಿಲ್ಲಿಯಲ್ಲಿರುವ ಪಾಕಿಸ್ತಾನದ ಉಸ್ತುವಾರಿಗಳನ್ನು ಕರೆಸಿದೆ ಎಂದು ವರದಿಯಾಗಿದೆ.
ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್ ಅವರು 1539 ರಲ್ಲಿ ನಿಧನರಾದರು ಎಂದು ನಂಬಲಾದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವು ಸಿಖ್ಖರಿಗೆ ಅತ್ಯಂತ ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ.
ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತದ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲಕ್ಕೆ ಸಂಪರ್ಕಿಸಲು ಕರ್ತಾರ್‌ಪುರ ಕಾರಿಡಾರ್ ಅನ್ನು 2019 ರಲ್ಲಿ, ಭಾರತ ಹಾಗೂ ಪಾಕಿಸ್ತಾನವು ಉದ್ಘಾಟಿಸಿದ್ದವು.
ತನ್ನ ಇನ್ ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ತನ್ನನ್ನು ಡಿಜಿಟಲ್ ಕ್ರಿಯೇಟರ್ ಎಂದು ವಿವರಿಸುವ ಮಹಿಳೆ ಸೌಲೇಹಾ ಕಳೆದ ವಾರ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ತನ್ನ ಫೋಟೋಗಳು ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಚಿತ್ರಗಳನ್ನು ಬಟ್ಟೆ ಬ್ರಾಂಡ್ ಕೂಡ ಹಂಚಿಕೊಂಡಿದೆ.
ದಿಲ್ಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಸೋಮವಾರ ಮಾಡಿದ್ದ ಟ್ವೀಟ್‌ನಲ್ಲಿ ಮಾಡೆಲ್‌ನ ವರ್ತನೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಜನರು ಕರ್ತಾರಪುರ ಸಾಹಿಬ್ ಅನ್ನು ಪಿಕ್ನಿಕ್ ಸ್ಪಾಟ್ ಎಂದು ಪರಿಗಣಿಸುವ ಪ್ರವೃತ್ತಿಯನ್ನು ನಿಲ್ಲಿಸುವಂತೆ ಸಿರ್ಸಾ ಪಾಕಿಸ್ತಾನ ಸರಕಾರಕ್ಕೆ ಕರೆ ನೀಡಿದ್ದರು.