ಅಸ್ಸಾಂ ವಿದ್ಯಾರ್ಥಿ ನಾಯಕನ ಥಳಿಸಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಸ್ತೆ ಅಪಘಾತದಲ್ಲಿ ಮೃತ್ಯು: ಪೊಲೀಸ್
ಗುವಹಾಟಿ: ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ನಾಯಕ ಅನಿಮೇಶ್ ಭುಯಾನ್ ಅವರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆಯ ಪ್ರಮುಖ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬುಧವಾರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಮೃತ ಆರೋಪಿ ನೀರಜ್ ದಾಸ್, ಈ ಪ್ರಕರಣದ ಸಂಬಂಧ ಬಂಧಿತ 13 ಮಂದಿಯಲ್ಲಿ ಒಬ್ಬನಾಗಿದ್ದ ಎಂದು indianexpress.com ವರದಿ ಮಾಡಿದೆ.
ಅನಿಮೇಶ್ ಅವರನ್ನು ಸೋಮವಾರ ಅಸ್ಸಾಂನ ಜೋರ್ಹಟ್ ಪಟ್ಟಣದ ವಾಹನ ದಟ್ಟಣೆಯ ರಸ್ತೆಯೊಂದರಲ್ಲಿ ಸುಮಾರು 50 ಮಂದಿಯ ತಂಡ ಥಳಿಸಿ ಸಾಯಿಸಿತ್ತು. ಅವರ ಜತೆಗಿದ್ದ ಇಬ್ಬರು ಸ್ನೇಹಿತರ ಮೇಲೆ ಕೂಡ ದಾಳಿ ನಡೆದಿತ್ತು. ಅವರ ವಾಹನವು ಹಿರಿಯ ನಾಗರಿಕರೊಬ್ಬರ ಸ್ಕೂಟರಿಗೆ ಢಿಕ್ಕಿ ಹೊಡೆದಿತ್ತೆಂಬ ಆರೋಪದ ಮೇಲೆ ಈ ಘಟನೆ ನಡೆದಿತ್ತು. ಆದರೆ ಹಿರಿಯ ನಾಗರಿಕ ಮದ್ಯದ ನಶೆಯಲ್ಲಿ ತಾನಾಗಿಯೇ ಸ್ಕೂಟರಿನಿಂದ ರಸ್ತೆಗೆ ಬಿದ್ದಿದ್ದ ಹಾಗೂ ಅನಿಮೇಶ್ ಮತ್ತು ಸ್ನೇಹಿತರು ಆತನ ಸಹಾಯಕ್ಕೆ ಧಾವಿಸಿದ ವೇಳೆ ಅವರ ವಾಹನ ತನಗೆ ಢಿಕ್ಕಿ ಹೊಡೆದಿದೆ ಎಂದು ಆ ವ್ಯಕ್ತಿ ಬೊಬ್ಬೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ಮೃತ ಆರೋಪಿ ನೀರಜ್‌ನನ್ನು ಆತ ನೀಡಿದ ಮಾಹಿತಿಯಂತೆ ಡ್ರಗ್ಸ್ ಅಡಗಿಸಿಡಲಾಗಿದೆ ಎನ್ನಲಾದ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಆತ ವಾಹನದಿಂದ ಹೊರಕ್ಕೆ ಜಿಗಿದಿದ್ದ, ಆಗ ಹಿಂಬದಿಯಲ್ಲಿದ್ದ ಬೆಂಗಾವಲು ವಾಹನ ಆತನ ಮೇಲೆ ಹರಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.