ಒಮೈಕ್ರಾನ್ ಭೀತಿ: ವಿದೇಶದಿಂದ ಆಗಮಿಸಿ 'ನಾಪತ್ತೆ'ಯಾದ 30 ಮಂದಿಗೆ ಶೋಧ

Update: 2021-12-03 01:58 GMT
File Photo: PTI

ಹೈದರಾಬಾದ್: ದಕ್ಷಿಣ ಆಫ್ರಿಕಾ ಪ್ರವಾಸಿ ಹಾಗೂ ಬೆಂಗಳೂರಿನ ವೈದ್ಯರೊಬ್ಬರಲ್ಲಿ ಒಮೈಕ್ರಾನ್ ವೈರಸ್ ಸೊಂಕು ಪತ್ತೆಯಾದ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ವಿದೇಶಿ ಪ್ರವಾಸದಿಂದ ಆಗಮಿಸಿ ’ನಾಪತ್ತೆ’ಯಾಗಿರುವ 30 ಮಂದಿಗೆ ಶೋಧ ಆರಂಭಿಸಲಾಗಿದೆ.

ಈ ಪೈಕಿ ಓರ್ವ ದಕ್ಷಿಣ ಆಫ್ರಿಕಾ ಪ್ರಜೆಯಾಗಿದ್ದು, ಈಗಾಗಲೇ ದೇಶ ತೊರೆದಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ದೇಶಾದ್ಯಂತ ಕಳೆದ 25 ಗಂಟೆಗಳಲ್ಲಿ 9,765 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 477 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಂಕಿತ ಒಮೈಕ್ರಾನ್ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಈ ಪೈಕಿ 10 ಮಂದಿ ಮುಂಬೈ ನಿವಾಸಿಗಳು ಸೇರಿದ್ದಾರೆ. ಇವರಿಗೆ ತಗುಲಿರುವುದು ರೂಪಾಂತರಿತ ವೈರಸ್ ಸೋಂಕೇ ಎಂದು ಪತ್ತೆ ಮಾಡಲು ಇವರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸ್‌ಗಾಗಿ ಕಳುಹಿಸಲಾಗಿದೆ. ಇದರ ಫಲಿತಾಂಶ ಮುಂದಿನ ವಾರ ಲಭ್ಯವಾಗುವ ನಿರೀಕ್ಷೆ ಇದೆ. ಆದರೆ 10 ಮಂದಿ ಮುಂಬೈ ನಿವಾಸಿಗಳ ಮಾದರಿಯಲ್ಲಿ ಪರೋಕ್ಷ ವಿಧಾನದ ಮೂಲಕ ತಪಾಸಣೆ ಮಾಡಿದಾಗ ಎಸ್ ಜೀನ್ ಪತ್ತೆಯಾಗಿದೆ ಎನ್ನಲಾಗಿದ್ದು, ಒಮೈಕ್ರಾನ್‌ನಲ್ಲಿ ಎಸ್ ಜೀನ್‌ಗಳು ಇರುವುದಿಲ್ಲ. ಇದರಿಂದಾಗಿ ಅಧಿಕಾರಿಗಳು ನಿರಾಳವಾಗಿದ್ದಾರೆ. ಉಳಿದ ನಾಲ್ಕು ಪ್ರಕರಣಗಳ ಫಲಿತಾಂಶ ಶೀಘ್ರವೇ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಒಮೈಕ್ರಾನ್ ಅಲೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಈಗಾಗಲೇ ಕಟ್ಟುನಿಟ್ಟಿನ ಪ್ರಯಾಣ ನಿರ್ಬಂಧವನ್ನು ಹೇರಿದೆ. ಅಂತರರಾಜ್ಯ ದೇಶೀಯ ವಿಮಾನಯಾನಿಗಳಿಗೆ ಎರಡೂ ಲಸಿಕೆ ಡೋಸ್ ಆಗಿದ್ದರೂ, ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ. ದಕ್ಷಿಣ ಆಫ್ರಿಕಾ, ಬೋಟ್ಸುವಾನಾ ಮತ್ತು ಜಿಂಬಾಬ್ವೆಯಿಂದ ಆಗಮಿಸುವವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News