10 ತಿಂಗಳ ಬಳಿಕ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ !

Update: 2021-12-04 01:34 GMT
ಸಾಂದರ್ಭಿಕ ಚಿತ್ರ

ಮುಂಬೈ: ಕೋವಿಡ್-19 ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವವರಿಗೆ ಲಸಿಕೆ ನೀಡಲು ಆರಂಭಿಸಿ 10 ತಿಂಗಳು ಕಳೆದ ಬಳಿಕ ಮಹಾರಾಷ್ಟ್ರದ ಅತ್ಯುನ್ನತ ಅಧಿಕಾರಿ, ರಾಜ್ಯದ ಹಂಗಾಮಿ ಮುಖ್ಯ ಕಾರ್ಯದರ್ಶಿ ದೇಬಾಶಿಶಸ್ ಚಕ್ರಬರ್ತಿ (59) ಗುರುವಾರ ಬೈಕುಲ್ಲಾದ ಜೆಜೆ ಆಸ್ಪತ್ರೆಯಲ್ಲಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

"ಅವರು ಗುರುವಾರ ಕೋವ್ಯಾಕ್ಸಿನ್ ಡೋಸ್ ಪಡೆದಿದ್ದಾರೆ" ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಬಹಿರಂಗಪಡಿಸಿದ್ದಾರೆ. ಮೂರು ದಿನ ಹಿಂದೆ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯಾಗಿದ್ದ ಸೀತಾರಾಮ ಕುಂಟೆ ನಿವೃತ್ತರಾದ ಬಳಿಕ ಚಕ್ರಬರ್ತಿ ಅಧಿಕಾರ ವಹಿಸಿಕೊಂಡಿದ್ದರು.

"ಲಸಿಕೀಕರಣ ಆರಂಭವಾದಾಗ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವೈದ್ಯರು ಮೊದಲ ಡೋಸ್ ಪಡೆದಿದ್ದರು. ಆದರೆ ಎಷ್ಟು ಮಂದಿ ಉನ್ನತ ಅಧಿಕಾರಿಗಳು ಇನ್ನೂ ಲಸಿಕೆ ಪಡೆದಿಲ್ಲ ಎಂಬ ಬಗ್ಗೆ ಯಾವ ದಾಖಲೆಯೂ ಇಲ್ಲ. ಬಹುಶಃ ಆರೋಗ್ಯ ಕಾರಣದಿಂದ ತಡವಾಗಿ ಲಸಿಕೆ ಪಡೆದಿರಬಹುದು" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಚಕ್ರಬರ್ತಿಯವರನ್ನು ಸಂಪರ್ಕಿಸಿದಾಗ, "ಇದು ವೈಯಕ್ತಿಕ ಆಯ್ಕೆಯ ವಿಚಾರ, ನಾನು ಯಾವಾಗ ಬೇಕಾದರೂ ಲಸಿಕೆ ಪಡೆಯಬಹುದು" ಎಂದು ಪ್ರತಿಕ್ರಿಯಿಸಿದರು. "ಇವು ವೈಯಕ್ತಿಕ ಆಯ್ಕೆಯ ವಿಚಾರ ಇರಬಹುದು ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಇರಬಹುದು. ಇದು ಬಲವಂತಪಡಿಸುವಂಥದ್ದೇನಲ್ಲ" ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಲಸಿಕೆ ಪಡೆಯದ 1.6 ಕೋಟಿ ನಾಗರಿಕರ ಪಟ್ಟಿಯಲ್ಲಿ ಗುರುವಾರದ ವರೆಗೆ ಚಕ್ರಬರ್ತಿ ಕೂಡಾ ಇದ್ದರು. ಜನವರಿ 16ರಂದು ಲಸಿಕೆ ನೀಡಿಕೆ ಆರಂಭವಾಗಿದ್ದು, ರಾಜ್ಯದ 91.4 ದಶಲಕ್ಷ ವಯಸ್ಕ ಜನರ ಪೈಕಿ ಶೇಕಡ 45ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News