ಭಾರತ ದೇಶೀ ಡ್ರೋನ್ ಪ್ರತಿರೋಧ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ: ಅಮಿತ್ ಶಾ

Update: 2021-12-05 18:02 GMT

ಜೈಸಲ್ಮಾರ್, ಡಿ. 5: ದೇಶದ ಗಡಿಗಳಲ್ಲಿ ಡ್ರೋನ್ ಗಳಿಂದ ಹೆಚ್ಚುತ್ತಿರುವ ಬೆದರಿಕೆ ತಡೆಯಲು ದೇಶಿ ಡ್ರೋನ್ ಪ್ರತಿರೋಧ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಈ ಡ್ರೋನ್ಗಳು ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಲಭ್ಯವಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಹೇಳಿದ್ದಾರೆ.

ಜೈಸಲ್ಮೇರ್‌ ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ 57ನೇ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸರಕಾರಕ್ಕೆ ಗಡಿ ಭದ್ರತೆ ರಾಷ್ಟ್ರೀಯ ಭದ್ರತೆ. ಅಲ್ಲದೆ, ಅದು ಸೇನಾ ಪಡೆಗೆ ಜಗತ್ತಿನಲ್ಲೇ ಅತ್ಯುತ್ತಮ ಗಡಿ ರಕ್ಷಣಾ ತಂತ್ರಜ್ಞಾನ ಒದಗಿಸಲು ಬದ್ಧವಾಗಿದೆ ಎಂದರು.

1965ರಲ್ಲಿ ಬಿಎಸ್ಎಫ್ ಸ್ಥಾಪನೆಯಾದ ಬಳಿಕ ಗಡಿಯಲ್ಲಿ ಮೊದಲ ಬಾರಿ ಸ್ಥಾಪನಾ ದಿನ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
 
‘‘ದೇಶ ಸುರಕ್ಷಿತವಾಗಿದ್ದಾಗ ಅದು ಏಳಿಗೆಯಾಗಬಹುದು ಹಾಗೂ ಮುಂದುವರಿಯಬಹುದು. ನೀವು ದೇಶಕ್ಕೆ ಸುರಕ್ಷೆ ನೀಡುತ್ತೀರಿ. ಗಡಿಗಳನ್ನು ರಕ್ಷಿಸುವ ಮೂಲಕ ದೇಶಕ್ಕೆ ಭದ್ರತೆ ನೀಡುತ್ತಿರಿ ಹಾಗೂ ಜಾಗತಿಕ ಮಟ್ಟದಲ್ಲಿ ವೇದಿಕೆ ಒದಗಿಸುತ್ತೀರಿ ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿರಿಸಿ’’ ಎಂದು ಶಾ ಅವರು ಹೇಳಿದರು.

ಬಿಎಸ್ಎಫ್ ಗೆ ಜಗತ್ತಿನಲ್ಲೇ ಅತ್ಯುತ್ತಮ ತಂತ್ರಜ್ಞಾನ ಒದಗಿಸುವುದಾಗಿ ಸರಕಾರ ಭರವಸೆ ನೀಡುತ್ತದೆ ಎಂದು ಅವರು ಹೇಳಿದರು.
 
‘‘ಇದು ಸರಕಾರದ ಬದ್ದತೆ. ಡ್ರೋನ್ ಗಳಿಂದ ಬೆದರಿಕೆ ಹೆಚ್ಚುತ್ತಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಬಿಎಸ್ಎಫ್, ಡಿಆರ್ಡಿಒ ಹಾಗೂ ಎನ್ಎಸ್ಜಿ ಡ್ರೋನ್ ಪ್ರತಿರೋಧ ತಂತ್ರಾಜ್ಞಾನ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ. ಶೀಘ್ರದಲ್ಲಿ ನಮ್ಮ ವಿಜ್ಞಾನಿಗಳು ದೇಶೀ ಡ್ರೋನ್ ಪ್ರತಿರೋಧ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಮರ್ಥರಾಗಲಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ’’ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News