ಕೋರೆಗಾಂವ್-ಭೀಮಾ ಪ್ರಕರಣ:3 ವರ್ಷಗಳ ಜೈಲು ವಾಸದ ನಂತರ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್‌ ಬಿಡುಗಡೆ

Update: 2021-12-08 18:03 GMT

ಮುಂಬೈ,ಡಿ.8: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರನ್ನು 50,000 ರೂ.ಗಳ ನಗದು ಬಾಂಡ್ನ ಆಧಾರದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಇಲ್ಲಿಯ ವಿಶೇಷ ಎನ್ಐಎ ನ್ಯಾಯಾಲಯವು ಬುಧವಾರ ಆದೇಶಿಸಿದೆ. ಭಾರದ್ವಾಜ್ ಅವರಿಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿತ್ತು.

ಡಿ.1ರಂದು ಭಾರದ್ವಾಜ್‌ಗೆ ಜಾಮೀನು ಮಂಜೂರು ಮಾಡಿದ್ದ ಬಾಂಬೆ ಉಚ್ಚ ನ್ಯಾಯಾಲಯವು ಜಾಮೀನು ಷರತ್ತುಗಳನ್ನು ನಿಗದಿಗೊಳಿಸಲು ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಿತ್ತು.

ಬುಧವಾರ ಭಾರದ್ವಾಜ್ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಹಾಜರಾಗಿದ್ದು,50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಬ್ಬರು ಅಥವಾ ಇಬ್ಬರು ಜಾಮೀನುದಾರರ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾ.ದಿನೇಶ ಕೊಠಾಳಿಕರ್ ಆದೇಶಿಸಿದರು. ತಾನು ಜಾಮೀನುದಾರರಿಗಾಗಿ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗುವಂತೆ ಮೂರು ತಿಂಗಳಿಗಾಗಿ 50,000 ರೂ.ಗಳ ನಗದು ಬಾಂಡ್ ಸಲ್ಲಿಸುವುದಾಗಿ ಭಾರದ್ವಾಜ್ ಅವರ ಕೋರಿಕೆಯನ್ನೂ ನ್ಯಾಯಾಲಯವು ಪುರಸ್ಕರಿಸಿತು.

ಆದರೆ ವಿಶೇಷ ನ್ಯಾಯಾಲಯವು ತಾನು ಕೆಲಸ ಮಾಡುವ ಛತ್ತೀಸ್‌ಗಡ ಮತ್ತು ದಿಲ್ಲಿಯಲ್ಲಿ ವಾಸವಿರಲು ತನಗೆ ಅವಕಾಶ ನೀಡಬೇಕೆಂಬ ಭಾರದ್ವಾಜ್ರ ಮನವಿಯನ್ನು ತಿರಸ್ಕರಿಸಿ,ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಿಂದ ಹೊರಕ್ಕೆ ತೆರಳುವುದನ್ನು ನಿರ್ಬಂಧಿಸಿತು ಮತ್ತು ತನ್ನ ಪಾಸ್‌ಪೋರ್ಟ್‌ನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ಅವರಿಗೆ ಆದೇಶಿಸಿತು.

ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡದಂತೆಯೂ ನ್ಯಾಯಾಲಯವು ಭಾರದ್ವಾಜ್ ಅವರಿಗೆ ನಿರ್ಬಂಧ ವಿಧಿಸಿದೆ. ಇದು ತನ್ನ ಕಕ್ಷಿದಾರರ ವಾಕ್ ಸ್ವಾತಂತ್ರದ ಉಲ್ಲಂಘನೆಯಾಗುತ್ತದೆ ಎಂಬ ಕಾರಣವನ್ನೊಡ್ಡಿ ಭಾರದ್ವಾಜ್ ಪರ ವಕೀಲ ಯುಗ್ ಚೌಧರಿ ಅವರು ಷರತ್ತನ್ನು ವಿರೋಧಿಸಿದರಾದರೂ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News