×
Ad

ದೇಶದಲ್ಲಿರುವ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಪೈಕಿ 2000 ನೋಟುಗಳ ಪಾಲು ಶೇ 15.11

Update: 2021-12-08 13:11 IST

ಹೊಸದಿಲ್ಲಿ: ದೇಶದಲ್ಲಿ ಚಲಾವಣೆಯಲ್ಲಿರುವ  ರೂ 2000 ಮುಖಬೆಲೆಯ ಕರೆನ್ಸಿ ನೋಟುಗಳ ಸಂಖ್ಯೆ  ಮೂರನೇ  ಒಂದಂಶದಷ್ಟು ಕಳೆದ 44 ತಿಂಗಳುಗಳ ಅವಧಿಯಲ್ಲಿ ಕುಸಿದಿದೆ ಹಾಗೂ ಮೌಲ್ಯವನ್ನು ಪರಿಗಣಿಸಿದಾಗ ಅರ್ಧದಷ್ಟು ಕುಸಿದಿದೆ. ರೂ 2000 ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಸರಕಾರ 2018-19ರಿಂದ ಕ್ರಮ ಕೈಗೊಂಡಿಲ್ಲ ಹಾಗೂ ಹಲವು ನೋಟುಗಳು ಸವಕಳಿಯಿಂದಾಗಿ ಚಲಾವಣೆಯಿಂದ ಹೊರಬಿದ್ದಿವೆ.

ದೇಶದಲ್ಲಿ  ಕಳೆದ ಐದು ವರ್ಷಗಳ ಅವಧಿಯಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ  ಏರಿಕೆಯಾಗಿದ್ದರೂ ಇವುಗಳ ಪೈಕಿ ರೂ 2000 ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾಗಿದೆ. ನವೆಂಬರ್ 4, 2016ರಲ್ಲಿ ದೇಶದಲ್ಲಿ ರೂ 17.74 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದ್ದರೆ ಈ ಸಂಖ್ಯೆ ನವೆಂಬರ್ 19, 2021ರಲ್ಲಿ ರೂ 28.78 ಲಕ್ಷ ಕೋಟಿ ಆಗಿದೆ.

ಈ ಮಾಹಿತಿಯನ್ನು ಮಂಗಳವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿತ್ತ ಖಾತೆಯ ರಾಜ್ಯ ಸಚಿವ ಪಂಕಜ್ ಚೌಧುರಿ ತಿಳಿಸಿದ್ದಾರೆ. ಮಾರ್ಚ್ 31, 2018ರಲ್ಲಿದ್ದಂತೆ ದೇಶದಲ್ಲಿ 2,000 ಮುಖಬೆಲೆಯ 3,363 ಮಿಲಿಯನ್ ನೋಟುಗಳಿದ್ದರೆ ನವೆಂಬರ್ 26,2021ರಂದು 2,233 ಮಿಲಿಯನ್  ನೋಟುಗಳು ಚಲಾವಣೆಯಲ್ಲಿವೆ ಎಂದು ಸಚಿವರು ತಿಳಿಸಿದ್ದಾರೆ. ಈಗ ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಪೈಕಿ 2000 ಮುಖಬೆಲೆಯ ನೋಟುಗಳ ಪ್ರಮಾಣ ಅವುಗಳ ಸಂಖ್ಯೆಯನ್ನು ಪರಿಗಣಿಸಿದಾಗ ಶೇ 1.75 ಹಾಗೂ ಮೌಲ್ಯವನ್ನು ಪರಿಗಣಿಸಿದಾಗ ಶೇ 15.11 ಆಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನವೆಂಬರ್ 8, 2016ರಲ್ಲಿ ಆಗ ಚಲಾವಣೆಯಲ್ಲಿದ್ದ ರೂ 500 ಹಾಗೂ ರೂ 1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದರೆ ನಂತರ ಹೊಸ ಸರಣಿಯ ರೂ 500 ಹಾಗೂ ರೂ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News