ವಿಶ್ವಮಾನವ ಹಕ್ಕು ಮತ್ತು ಭಾರತ
ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನ. ಈ ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬ ಮಾನವ ಹಕ್ಕುಗಳು ಸಂರಕ್ಷಿಸಲ್ಪಡಬೇಕು, ಅವರನ್ನು ಯಾರೂ ದಮನಿಸಬಾರದು, ಮನುಷ್ಯನಿಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು. ಅವರ ಹಕ್ಕುಗಳಿಗೆ ಗೌರವ ಸಂದಬೇಕು ಎಂಬ ಸದುದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 10 ಅನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ.
ಈ ದಿನವನ್ನು 1948ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವ ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಇದರ ನೆನಪಿಗಾಗಿ ಈ ದಿನವನ್ನು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಪ್ರಪಂಚದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆ ಹೊಂದಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸುತಾರಾಂ ಆಗಕೂಡದು. ಆದರೆ ಗೋದ್ರಾ ಹತ್ಯಾಕಾಂಡದ ರೂವಾರಿಗಳು ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಮಾನವ ಹಕ್ಕುಗಳು ಎಂಬ ವಿಷಯವು ಭಾರತದಲ್ಲಿ ತಮಾಷೆಯ ವಸ್ತುವಂತಾಗಿ ಹೋಗಿದೆ. ಈ ಜನರು ಅಧಿಕಾರಕ್ಕೆ ಬರುತ್ತಿದ್ದಂತೆ ಯಾವ ಮುನ್ಸೂಚನೆಯನ್ನೂ ನೀಡದೆ ಏಕಾಏಕಿ ನೋಟ್ ಬ್ಯಾನ್ ಮಾಡಿದ ಪರಿಣಾಮ ಅನೇಕ ಮಧ್ಯಮ ವರ್ಗದ ಜನರು ಬೀದಿ ಬದಿಯಲ್ಲಿ ಸಾಲುಗಟ್ಟಿ ನಿಂತು ಹೈರಣಾದರು. ಅನೇಕ ಜನರು ಈ ಹಠಾತ್ ನಿರ್ಧಾರದಿಂದ ದಿಕ್ಕು ತೋಚದಂತಾಗಿ ಆರ್ಥಿಕ ಆಘಾತಕ್ಕೊಳಗಾದರು. ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಆಳುವವರ ಸರ್ವಾಧಿಕಾರಿ ಧೋರಣೆಗೆ, ಅಧಿಕಾರ ಶಾಹಿಗಳ ದಮನಿತ ನೀತಿಗೆ ಬಲಿಯಾಗಿ ಅನೇಕ ಜನರು ಪ್ರಾಣ ತೆತ್ತರು. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗಿರಲಿಲ್ಲವೇ?
ಕಾಶ್ಮೀರದ ನಾಗರಿಕರ ಮೇಲೆ ಎರಡು ವರ್ಷಗಳ ಹಿಂದೆ ಅಚಾನಕ್ ಆಗಿ ಲಾಕ್ ಡೌನ್ ಹೇರಲಾಯಿತು. ಅಲ್ಲಿನ ಜನರ ಸ್ವಾತಂತ್ರ್ಯವನ್ನು ಹರಣ ಮಾಡಲಾಯಿತು. ಮೂಲಭೂತ ಸೌಕರ್ಯವನ್ನೂ ಕೊಡದೆ ಅಂತರ್ಜಾಲ ವ್ಯವಸ್ಥೆಯನ್ನು ಬಂದ್ ಮಾಡಿಸಿ ಅಲ್ಲಿನ ನಾಗರಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ಜಗತ್ತಿಗೆ ಗೊತ್ತಾಗದಂತೆ ಮುಚ್ಚಿಹಾಕಲು ಕುತ್ಸಿತ ವ್ಯವಸ್ಥೆಯನ್ನು ಹೆಣೆಯಲಾಯಿತು. ಅಲ್ಲಿನ ನಾಗರಿಕರ ಬದುಕನ್ನು ಎರಡು ದಶಕಗಳಷ್ಟು ಹಿಂದೆ ಒಯ್ಯಲಾಯಿತು. ಇಂದಿಗೂ ಎರಡು ವರ್ಷಗಳ ಹಿಂದೆ ಹೇರಿರುವ ಲಾಕ್ ಡೌನ್ ಸಂಪೂರ್ಣವಾಗಿ ತೆರವಾಗಿಲ್ಲ. ಕೇಂದ್ರ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಂದಾಗಿ ಅಲ್ಲಿನ ನಾಗರಿಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಾವಿರಾರು ನಾಗರಿಕರು, ಸೈನಿಕರು ಸಾವಿಗೀಡಾಗುತ್ತಿದ್ದಾರೆ. ಇವೆಲ್ಲಾ ಮಾನವ ಹಕ್ಕು ನೀತಿಗಳ ಉಲ್ಲಂಘನೆ ಆಗಿರಲಿಲ್ಲವೇ? ಭಾರತ ದಲ್ಲಿರುವದೇನು ರಾಜರಾಡಳಿತವೇ? ಇದಕ್ಕೆಲ್ಲಾ ಸಮರ್ಪಕ ಉತ್ತರ ನೀಡದೆ ಕೇಂದ್ರ ಸರಕಾರ ನುಣುಚಿ ಕೊಳ್ಳುತ್ತಿರುವುದು ಸರಿಯೆ?
CAA, NRC ತರಲು ಶತಾಯ ಗತಾಯ ಪ್ರಯತ್ನ ನಡೆಸಲಾಯಿತು. ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕುತಂತ್ರ ಹೆಣೆಯಲಾಯಿತು. ದೇಶಾದ್ಯಂತ ಊಹಿಸಿರದ ಮಟ್ಟದಲ್ಲಿ ಪ್ರತಿಭಟನೆ, ವಿರೋಧಗಳು ವ್ಯಕ್ತವಾದ್ದರಿಂದ ಸದ್ಯಕ್ಕೆ ಬಿಜೆಪಿ ಸರಕಾರ ಹಿಂದೆ ಸರಿದಿದೆಯಾದರೂ, ಇಂತಹ ಕಾಯ್ದೆಗಳನ್ನು ದೇಶದ ಜನರ ಮೇಲೆ ಹೊರಟಿದ್ದು ಎಷ್ಟು ದೊಡ್ಡ ಮಾನವಹಕ್ಕುಗಳ ಉಲ್ಲಂಘನೆಯಾಗಿತ್ತೆಂದರೆ ಬಿಜೆಪಿ ಹುಟ್ಟಿದ್ದೆ ಮಾನವ ಹಕ್ಕುಗಳನ್ನು ಉಲ್ಲಂಘಿಸಲು ಎಂಬುವಷ್ಟು!.
ಬಂಡವಾಳ ಶಾಹಿಗಳ ಜೋಳಿಗೆ ತುಂಬುವ ಸಲುವಾಗಿ ರೈತರಿಗೆ, ಕೃಷಿಕರಿಗೆ ಖುದ್ದು ಬೇಡವಾಗಿದ್ದ ಕೃಷಿಕಾಯ್ದೆಗಳನ್ನು ಅವರ ಮೇಲೆ ಹೇರ ಹೊರಟ ಸರಕಾರ ಒಂದು ವರ್ಷಗಳಷ್ಟು ದೀರ್ಘಕಾಲ ರೈತರನ್ನು ಬೀದಿಯಲ್ಲಿ ಧರಣಿ ಕೂರಿಸಿತು. ಭಾರತದಲ್ಲಿರುವುದು ಸ್ವಾತಂತ್ರ್ಯಪೂರ್ವದ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವೊ ಅಥವಾ ಇದೊಂದು ಪ್ರಜಾಪ್ರಭುತ್ವ ರಾಷ್ಟ್ರವೋ ಎನ್ನುವಷ್ಟರ ಮಟ್ಟಿಗೆ ಪ್ರತಿಭಟನಾನಿರತ ರೈತರ ಮೇಲೆ ಅಕ್ರಮಗೈಯ್ಯಲಾಯಿತು. ಒಂದು ವರ್ಷದ ಅವಧಿಯಲ್ಲಿ 600ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಇದೆಷ್ಟು ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ನೋಡಿ. ಯಾವುದೋ ಶ್ರೀಮಂತರ ಜೋಳಿಗೆ ಭರ್ತಿ ಮಾಡಲ ರೈತರ ಹಕ್ಕುಗಳನ್ನು, ದೇಶದ ಅನ್ನದಾತರ ಸ್ವಾಭಿಮಾನವನ್ನು ಕೆಣಕುವುದು. ಇದೆಲ್ಲ ಜನಪರ, ಮಾನವರ ಪರ ಇರುವ ಸರಕಾರ ಮಾಡುವಂತಹ ಕೆಲಸವೇ?
ನಾಗಲ್ಯಾಂಡ್ ನ ಘಟನೆ ಸೇರಿದಂತೆ ಪಟ್ಟಿ ಇನ್ನೂ ಬಹಳಷ್ಟು ದೊಡ್ಡದಿದೆ. ಭಾರತದಲ್ಲಿ ಈ ಪಾಟಿ ಮಾನವ ಹಕ್ಕುಗಳ ಉಲ್ಲಂಘನೆ ಸಾರಸಗಟಾಗಿ ನಡೆಯುತ್ತಿದ್ದರೂ ಇಲ್ಲಿನ ಮಾಧ್ಯಮಗಳು ಬಿಕರಿಯಾದ ಕಾರಣ ಧ್ವನಿ ಎತ್ತುತ್ತಿಲ್ಲ. ಇಲ್ಲಿನ ಸರಕಾರಿ ಪ್ರಾಯೋಜಕ ಕಂಪೆನಿಗಳಂತಾಗಿರುವ ರಾಷ್ಟ-ರಾಜ್ಯ ಮಾನವಹಕ್ಕುಗಳ ಆಯೋಗವಂತೂ ನಿರ್ಜೀವವಾಗಿ ದಶಕಗಳೇ ಕಳೆದಿವೆ. ತದ್ವಿರುದ್ಧವಾಗಿ ಮಾನವಹಕ್ಕುಗಳ ಪರವಾಗಿ ಮಾತನಾಡಿದ ಒಂದೇ ತಪ್ಪಿಗೆ ಸಾವಿರಾರು ಅಮಾಯಕ ಜನರು ಜೈಲಿನಲ್ಲಿ ಕಂಬಿ ಎಣಿಸುತ್ತಿರುವಾಗ ದಮನಿತರ ಪರವಾಗಿ ಧ್ವನಿ ಎತ್ತದೆ, ಕೇವಲ ತಮ್ಮ ಪತ್ನಿ-ಮಕ್ಕಳು ಕುಟುಂಬ ಸುಖವಾಗಿದ್ದಾರೆ ಸಾಕು ಎಂಬ ಪಾಲಿಸಿಯೊಂದಿಗೆ ಬದುಕುತ್ತಾ, ನೈತಿಕ ಪತನದತ್ತ ಸಾಗಿರುವ ನಮಗೆ ಮಾನವ ಹಕ್ಕುಗಳ ದಿನವನ್ನು ಆಚರಿಸುವ ನೈತಿಕ ಹಕ್ಕೇನಾದರೂ ಇದೆಯೇ?
- ಅಝೀಝ್ ಉದ್ಯಾವರ, ಅಧ್ಯಕ್ಷರು
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲೆ