ರಾವತ್ ನಿಧನದ ಬಗ್ಗೆ ಜಾಲತಾಣಗಳಲ್ಲಿ ಆಕ್ಷೇಪಕಾರಿ ಪೋಸ್ಟ್: ದೇಶಾದ್ಯಂತ ಎಂಟು ಮಂದಿ ಬಂಧನ

Update: 2021-12-12 18:18 GMT

ಹೊಸದಿಲ್ಲಿ,ಡಿ.13: ರಕ್ಷಣಾ ಪಡೆಗಳ ವರಿಷ್ಠ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 11 ಮಂದಿ ರಕ್ಷಣಾಸಿಬ್ಬಂದಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದಲ್ಲಿ ಕರ್ನಾಟಕದಲ್ಲಿ ಇಬ್ಬರು ಸೇರಿದಂತೆ ದೇಶಾದ್ಯಂತ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ರಾಜಸ್ಥಾನದಿಂದ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜ.ರಾವತ್ ನಿಧನದ ಕೆಲವೇ ತಾಸುಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಣಕ (ವೀಮ್) ಪ್ರಸಾರ ಮಾಡಿದ್ದ ಆರೋಪದಲ್ಲಿ ಟೋಂಕ್ ಜಿಲ್ಲೆಯ ನಿವಾಸಿ ಜವಾದ್ ಖಾನ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಮುದಾಯಗಳ ನಡುವೆ ಶತ್ರುತ್ವವನ್ನು ಉತ್ತೇಜಿಸಿದ ಆರೋಪದಲ್ಲಿ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆತನನ್ನು ಭಾರತೀಯ ದಂಡಸಂಹಿತೆಯ ಸೆಕ್ಷನ್ 505 (2) ಅಡಿ ಬಂಧಿಸಲಾಗಿದೆ.
       
ರಾವತ್ ನಿಧನಕ್ಕೆ ಸಂಬಂಧಿಸಿ ನಿಂದನಾತ್ಮಕ ಹಾಗೂ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಗಳನ್ನು ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಶನಿವಾರ ರಾಜಸ್ತಾನದ ಪ್ರತಾಪ್‌ಘರ್‌ನಲ್ಲಿ ಡಿಸೆಂಬರ್ 11ರಂದು ಮನೀಶ್ ಕುಮಾರ್ ಮೀನಾ (28) ಹಾಗೂ ಜೀವನ್ ಲಾಲ್ ನಿನಾಮಾ (25) ಅವರನ್ನು ಬಂಧಿಸಲಾಗಿದೆ. ಗುಜರಾತ್‌ನ ಅಮ್ರೇಲಿಯಲ್ಲಿ ಸೇನಾ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿ ಟ್ವಿಟ್ಟರ್‌ನಲ್ಲಿ ಆಕ್ಷೇಪಕಾರಿ ಬರಹಗಳನ್ನು ಪ್ರಸಾರ ಮಾಡಿದ ಮಾಜಿ ಉಪಸರಪಂಚ ಶಿವಾಭಾಯಿ ಅಹಿರ್ (44) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಟ್ವಿಟ್ಟರ್‌ನಲ್ಲಿ 153 (ಎ) ಶತ್ರುತ್ವಕ್ಕೆ ಪ್ರಚೋದನೆ, , 505 (1) ( ವದಂತಿಗಳ ಹರಡುವಿಕೆ ) ಹಾಗೂ 295(ಎ) (ದುರುದ್ದೇಶಪೂರ್ವಕ ದ್ವೇಷಯುತ ಹಾಗೂ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ) ಅನ್ವಯ ಪ್ರಕರಣ ದಾಖಲಿಸಲಾಗಿದ.
  
ಭರೂಚ್‌ನಲ್ಲಿ ಈ ಘಟನೆಗೆ ಸಂಬಂಧಿಸಿ ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅವರ ಪುತ್ರ ಫಿರೋಜ್ ದಿವಾನ್ಅವರನ್ನು ಬಂಧಿಸಲಾಗಿದೆ. ಜನರಲ್ ರಾವತ್ ಅವರ ಸಾವನ್ನು ಸಂಭ್ರಮಿಸುವ ಬರಹವನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಬುಡಕಟ್ಟು ನಾಕ ದುರ್ಗೇಶ್ ವಕ್ಸಾಲೆ ಅವರನ್ನು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಬಂಧಿಸಲಾಗಿದೆ. ಆತನ ವಿರುದ್ಧ ಬಿಜೆಪಿ ಶಾಸಕ ರಾಮ್ ಡಂಗೋರೆ ದೂರು ನೀಡಿದ್ದರು.
  
  ಟ್ವಿಟ್ಟರ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ  ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತವು ಒಂದು ಸಂಚಾಗಿದೆ ಹಾಗೂ ಆಡಳಿತಾರೂಢ ಡಿಎಂಕೆಯು ಪ್ರತ್ಯೇಕತಾವಾದಿ ರಾಜಕೀಯವನ್ನು ಉತ್ತೇಜಿಸುತ್ತಿದೆಯೆಂದು ಎಂದು ಆರೋಪಿಸಿದ್ದ ತಮಿಳುನಾಡಿನಲ್ಲಿ ಮರಿದಾಸ್ ಎಂಬಾತನನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ.
   
ಜಮ್ಮುವಿನಲ್ಲಿ ಪಾಕ್‌ನಿಂದ ಸೃಷ್ಟಿಯಾದ ಫೇಸ್ಬುಕ್ ಪೋಸ್ಟ್ ಪ್ರಸಾರ ಮಾಡಿದ್ದಕ್ಕಾಗಿ ಹಾಗೂ ಜನರಲ್ ರಾವತ್ ವಿರುದ್ಧ ಮಾನಹಾನಿಕರ ಅನಿಸಿಕೆಗಳನ್ನು ಪ್ರಸಾರ ಮಾಡಿದ್ದ ಅಂಗಡಿ ಮಾಲಕ ಮುಹಮ್ಮದ್ ಎ. ಶಾಫಿ ಎಂಬಾತನನ್ನು ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ರಾವತ್ ನಿಧನದ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಕಾರಿ ಪೋಸ್ಟ್‌ಗಳನ್ನು ಮಾಡಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News