ನಾಗಾಲ್ಯಾಂಡ್ ನಾಗರಿಕರ ಹತ್ಯೆ:ಸಶಸ್ತ್ರ ಪಡೆಗಳ ವಿರುದ್ಧ ರಾಜ್ಯಾದ್ಯಂತ ವ್ಯಾಪಿಸಿದ ಪ್ರತಿಭಟನೆ
ಕೊಹಿಮಾ,ಡಿ.21: ಕಳೆದ ವಾರ ನಾಗಾಲ್ಯಾಂಡ್ ನಲ್ಲಿ ಸೇನಾಪಡೆಗಳು ಅಮಾಯಕ ನಾಗರಿಕರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಭಾವಿಸಿ 14 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಆ ರಾಜ್ಯದ ವಿವಿಧೆಡೆ ಹರಡುತ್ತಿದೆ.
ನಾಗರಿಕರ ಮೇಲೆ ನಡೆದಿರುವ ಗೋಲಿಬಾರ್ ಘಟನೆಯ ಪ್ರತಿಭಟಿಸಿ ಕೊನ್ಯಾಕ್ ನಾಗಾ ಬುಡಕಟ್ಟು ಪಂಗಡವು ನಾಗಾಲ್ಯಾಂಡ್ ನ ಐದು ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ವಿರುದ್ಧ ಅಸಹಕಾರ ಚಳವಳಿಯನ್ನು ಘೋಷಿಸಿವೆ. ತಮ್ಮ ಬೇಡಿಕೆಗಳು ಈಡೇರುವವರೆಗೆ ಹಾಗೂ ಹತ್ಯೆಯಾದವರಿಗೆ ನ್ಯಾಯ ದೊರೆಯುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವು ಹೇಳಿವೆ.
ಅಸಹಕಾರ ಚಳವಳಿಯ ಭಾಗವಾಗಿ ‘‘ಯಾವುದೇ ರಾಷ್ಟ್ರೀಯ ಕಾರ್ಯಕ್ರಮಗಳ ಆಚರಣೆಗಳಿಂದ ದೂರವಿರಲು, ಸೇನೆಯು ನಾಗರಿಕರೊಂದಿಗೆ ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರಲು, ಸೇನೆಯ ಅಧಿಕೃತ ಆಹ್ವಾನ ಕಾರ್ಯಕ್ರಮಗಳಲ್ಲಿ ಹಾಜರಾಗದಿರಲು ಹಾಗೂ ಪೂರ್ವ ನಾಗಾಲ್ಯಾಂಡ್ ಪ್ರದೇಶದಲ್ಲಿ ಯಾವುದೇ ನೇಮಕಾತಿ ಅಭಿಯಾನಕ್ಕೆ ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ’’ ಪೂರ್ವ ನಾಗಾಲ್ಯಾಂಡ್ ಜನತಾ ಸಂಘಟನೆ (ಇಎನ್ಪಿಓ)ಯ ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಡಿಸೆಂಬರ್ 4 ಹಾಗೂ 5ರಂದು ಮೋನ್ ಜಿಲ್ಲೆಯಲ್ಲಿ 14 ಮಂದಿ ಅಮಾಯಕ ನಾಗರಿಕರನ್ನು ಹತ್ಯೆಗೈದ ಪ್ರಕರಣದಲ್ಲಿ ಶಾಮೀಲಾಗಿರುವ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಅವರನ್ನು ದೇಶದ ಪ್ರಸಕ್ತ ಕಾನೂನಿನಡಿ ವಿಚಾರಣೆಗೊಳಪಡಿಸಬೇಕು’’ ಎಂಬುದಾಗಿ ನ್ಯಾಯಾಲಯ ಆಗ್ರಹಿಸಿದೆ.
ಭದ್ರತಾಪಡೆಗಳು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದವೆಂದು ಡಿಸೆಂಬರ್ 6ರಂದು ಕೇಂದ್ರ ಗೃಹ ಸಚಿವ ಅಮಿತ್ಶಾ ಸಂಸತ್ ನಲ್ಲಿ ನೀಡಿರುವ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸಮಗ್ರ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆಗಳನ್ನು ಕೂಡಾ ಸಂಘಟನೆ ಕೇಂದ್ರ ಸರಕಾರದ ಮುಂದಿರಿಸಿದೆ.
ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನಾಪಡೆಗಳು ತಪ್ಪಾಗಿ ನಡೆಸಿದ ಕಾರ್ಯಾಚರಣೆ ಹಾಗೂ ಆನಂತರ ಭುಗಿಲೆದ್ದ ಹಿಂಸಾಚಾರದಲ್ಲಿ 14 ಮಂದಿ ನಾಗರಿಕರು ಹಾಗೂ ಓರ್ವ ಸೈನಿಕ ಸಾವನ್ನಪ್ಪಿದ್ದ.