ದಿಲ್ಲಿ ನ್ಯಾಯಾಲಯದಲ್ಲಿ ನಡೆದ ಸ್ಫೋಟದ ಹಿಂದೆ ರಕ್ಷಣಾ ವಿಜ್ಞಾನಿಯ ಕೈವಾಡವಿದೆ: ಪೊಲೀಸರು

Update: 2021-12-18 09:45 GMT

ಹೊಸದಿಲ್ಲಿ: ಈ ತಿಂಗಳ ಆರಂಭದಲ್ಲಿ ದಿಲ್ಲಿಯ ನ್ಯಾಯಾಲಯದಲ್ಲಿ ನಡೆದ ಸ್ಫೋಟದ ಹಿಂದೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ವಿಜ್ಞಾನಿಯ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜ್ಞಾನಿಯು ತನ್ನ ನೆರೆಹೊರೆಯ ವಕೀಲರನ್ನು ಗುರಿಯಾಗಿಸಲು ಸ್ಫೋಟಕವನ್ನು ಇಟ್ಟಿದ್ದಾನೆಂದು ತಿಳಿದುಬಂದಿದೆ.

ಡಿಆರ್‌ಡಿಒದ ಹಿರಿಯ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ ಅವರನ್ನು ಬಂಧಿಸಲಾಗಿದ್ದು, ಆರೋಪಿಯ ನಿವಾಸದಿಂದ ಬಾಂಬ್ ತಯಾರಿಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕಟಾರಿಯಾ  ವಕೀಲನ ಸೋಗಿನಲ್ಲಿ ನ್ಯಾಯಾಲಯಕ್ಕೆ ಪ್ರವೇಶಿಸಿ ಸ್ಫೋಟದ ನಂತರ ಪರಾರಿಯಾಗಿದ್ದನು. ಕಟಾರಿಯಾ ಆತನ ನೆರೆಹೊರೆಯವರು ಹಾಗೂ  ವಕೀಲ ಅಮಿತ್ ವಶಿಷ್ಟ್ ನಡುವೆ ಹಳೆಯ ವಿವಾದವಿತ್ತು. ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಆ ದಿನ ನ್ಯಾಯಾಲಯಕ್ಕೆ ಹಾಜರಾದ ವಶಿಷ್ಠನನ್ನು ಕೊಲ್ಲಲು ಕಟಾರಿಯಾ ನ್ಯಾಯಾಲಯದಲ್ಲಿ ಸ್ಫೋಟಕವನ್ನು ಇಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ನ್ಯಾಯಾಲಯದ ಆವರಣದೊಳಗೆ ಹೇಗೆ ಸ್ಫೋಟಕಗಳನ್ನು ತೆಗೆದುಕೊಂಡು ಹೋದನು  ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ಬಾಂಬ್ ಸ್ಫೋಟಿಸಲು ಬಳಸಿದ ರಿಮೋಟ್ ಮತ್ತು ಇತರ ಕೆಲವು ವಸ್ತುಗಳನ್ನು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಖರೀದಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈತ ಎಲ್ಲಿಂದ ಸ್ಫೋಟಕಗಳನ್ನು ಸಿದ್ಧಪಡಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದಿಲ್ಲಿ ಪೊಲೀಸ್ ಆಯುಕ್ತ  ರಾಕೇಶ್ ಅಸ್ತಾನ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಸೆಲ್ ತಂಡವು ಆ ದಿನ ರೋಹಿಣಿ ನ್ಯಾಯಾಲಯಕ್ಕೆ ಬಂದ 1,000 ವಾಹನಗಳನ್ನು ಪರಿಶೀಲಿಸಿತು ಹಾಗೂ  100 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದೆ.  ತನಿಖಾ ತಂಡವು ಅಂದು ನ್ಯಾಯಾಲಯಕ್ಕೆ ಭೇಟಿ ನೀಡಿದವರನ್ನೂ ಪರಿಶೀಲಿಸಿತು ಎಂದರು.

ಸ್ಫೋಟಕವನ್ನು ಇರಿಸಲಾಗಿದ್ದ ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿ ದಿಲ್ಲಿಯಲ್ಲಿ ಗೋಡೌನ್ ಹೊಂದಿರುವ ಮುಂಬೈ ಮೂಲದ ಸಂಸ್ಥೆಯ ಲಾಂಛನವಿದ್ದು,ಈ  ಸಂಸ್ಥೆಯು ತನಿಖೆಗೆ ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News