×
Ad

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಶ್ರೀಕಾಂತ್ ಫೈನಲ್ ಗೆ ಲಗ್ಗೆ

Update: 2021-12-18 23:54 IST
photo:PTI

ಮ್ಯಾಡ್ರಿಡ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಶನಿವಾರ ಭಾರತದ ಆಟಗಾರರಾದ ಕೆ. ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ನಡುವೆ ನಡೆದ ರೋಚಕ ಸೆಮಿ ಫೈನಲ್ ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು ಲಕ್ಷ್ಯ ಸೇನ್ ಗೆದ್ದುಕೊಂಡರೆ ಎರಡನೇ ಗೇಮ್ ಶ್ರೀಕಾಂತ್ ಗೆದ್ದುಕೊಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ಅನ್ನು 20-17 ಅಂತರದಿಂದ ಗೆದ್ದುಕೊಂಡ  ಶ್ರೀಕಾಂತ್ ಫೈನಲ್ ಗೆ ಲಗ್ಗೆ ಇಟ್ಟರು.

ಶ್ರೀಕಾಂತ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಪುರುಷ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಫೈನಲ್ ಗೆ ತಲುಪಿದ ಶ್ರೀಕಾಂತ್ ಕನಿಷ್ಟಪಕ್ಷ ಬೆಳ್ಳಿ ಪದಕವನ್ನು ಖಚಿತಪಡಿಸಿದರೆ ಲಕ್ಷ್ಯ ಸೇನ್ ತನ್ನ ಮೊದಲ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ 20ರ ಹರೆಯದ ಕಿರಿಯ ಆಟಗಾರ ಸೇನ್ ಮೊದಲ ಗೇಮ್ ಅನ್ನು ಕೇವಲ 17 ನಿಮಿಷಗಳಲ್ಲಿ 21-17 ಅಂತರದಿಂದ ಗೆದ್ದುಕೊಂಡು ಶ್ರೀಕಾಂತ್ ಗೆ ಶಾಕ್ ನೀಡಿದರು.

ಮೊದಲ ಗೇಮ್ ಸೋಲಿನ ಶಾಕ್ ನಿಂದ ಬೇಗನೆ ಚೇತರಿಸಿಕೊಂಡ ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್ 2ನೇ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.

ಸೇನ್ ಹಾಗೂ ಶ್ರೀಕಾಂತ್ ಶುಕ್ರವಾರ ಸೆಮಿ ಫೈನಲ್ ಗೆ ತಲುಪುವುದರೊಂದಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಮೊದಲ ಬಾರಿ ಭಾರತಕ್ಕೆ ಎರಡು ಪದಕಗಳನ್ನು ದೃಢಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News