2018ರ ಬಳಿಕ ಅಫ್ಘಾನ್, ಪಾಕ್, ಬಾಂಗ್ಲಾದ 3,117 ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ

Update: 2021-12-22 17:46 GMT

ಹೊಸದಿಲ್ಲಿ, ಡಿ. 22: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ನಿಯಮಾವಳಿಗಳನ್ನು ಇನ್ನಷ್ಟೇ ರೂಪಿಸಬೇಕಾದರೂ, 2018ರ ಬಳಿಕ ಭಾರತೀಯ ಪೌರತ್ವ ಪಡೆದವರ ಪೈಕಿ ಹೆಚ್ಚಿನವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಅಲ್ಪಸಂಖ್ಯಾತರು ಎನ್ನುವುದನ್ನು ಸರಕಾರದ ಅಂಕಿಅಂಶಗಳು ತೋರಿಸಿವೆ.

ಸಂಸತ್ತಿನಲ್ಲಿ ಸರಕಾರ ನೀಡಿರುವ ಮಾಹಿತಿಗಳ ಪ್ರಕಾರ, ಈ ಅವಧಿಯಲ್ಲಿ ಮೂರು ನೆರೆಯ ದೇಶಗಳ ಹಿಂದೂ, ಸಿಖ್, ಜೈನ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದ 8,244 ಜನರು ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ, ಈ ವರ್ಷದಡಿಸೆಂಬರ್ವರೆಗೆ 3,117 ಮಂದಿಗೆ ಪೌರತ್ವ ನೀಡಲಾಗಿದೆ.

ಅದೂ ಅಲ್ಲದೆ, 2018 ಮತ್ತು 2020ರ ನಡುವಿನ ಅವಧಿಯಲ್ಲಿ, ಜಗತ್ತಿನಾದ್ಯಂತ 2,254 ವಿದೇಶೀಯರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. 2021ರ ಒಟ್ಟು ಅಂಕಿಸಂಖ್ಯೆಗಳು ಲಭ್ಯವಿಲ್ಲ.

"2018, 2019, 2020 ಮತ್ತು 2021ರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳ ಹಿಂದೂ, ಸಿಖ್, ಜೈನ ಮತ್ತು ಕ್ರೈಸ್ತ ಧಾರ್ಮಿಕ ಗುಂಪುಗಳಿಗೆ ಸೇರಿದ 3,117 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ’’ ಎಂದು ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರೈ ಬುಧವಾರ ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ಭಾರತದಲ್ಲಿ ನಿರಾಶ್ರಿತ ನೀತಿಯಿಲ್ಲ. ಸಿಎಎಗೆ ಸಂಸತ್ತು 2019 ಡಿಸೆಂಬರ್ 12ರಂದು ಅಂಗೀಕಾರ ನೀಡಿದೆ. ಆದರೆಅದರ ನಿಯಮಾವಳಿಗಳನ್ನು ಇನ್ನೂರೂಫಿಸಲಾಗಿಲ್ಲ. ಸಿಎಎ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದಕ್ಕಾಗಿ ಅದರ ವಿರುದ್ಧ ಭಾರೀ ಪ್ರತಿಭಟನೆ ನಡೆದು ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

ಭಾರತೀಯ ಪೌರತ್ವ ಪಡೆದ ಒಟ್ಟು ವಿದೇಶೀಯರ ಸಂಖ್ಯೆಗೆ ಸಂಬಂಧಿಸಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರೈ, 2016 ಮತ್ತು 2020ರ ನಡುವಿನ ಅವಧಿಯಲ್ಲಿ 4,177 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News