​ಮದ್ಯದ ಉತ್ಪಾದನೆ ಮತ್ತು ಮದ್ಯವರ್ಜನೆ

Update: 2021-12-22 18:01 GMT

ಮಾನ್ಯರೇ,

ಮದ್ಯಸೇವನೆಯಿಂದ ಜನರಮೇಲಾಗುವ, ಅದರಲ್ಲೂ ಬಡಜನರಮೇಲಾಗುವ ದುಷ್ಪರಿಣಾಮಗಳನ್ನು ಕುರಿತಂತೆ ಪತ್ರಿಕೆಗಳಲ್ಲಿ ಲೇಖನಗಳು ಬರದಿದ್ದರೂ, ಮದ್ಯವರ್ಜನೆಗಾಗಿ ಪ್ರತಿಷ್ಠಿತ ಸಮಾಜಸೇವಾ ಸಂಸ್ಥೆಗಳು ಮಾಡಿದ 'ಸಾಧನೆಗಳ' ಬಗ್ಗೆ ಆಗಿಂದಾಗ್ಗೆ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಮದ್ಯಸೇವನೆಯು ವ್ಯಸನಿಗಳ ಆರೋಗ್ಯ ಹಾಗೂ ಜೀವಕ್ಕೆ ಕುಂದು ತರುವಂತೆಯೇ ಮದ್ಯ ವ್ಯಸನಿಗಳ ಕುಟುಂಬಗಳ ಆರ್ಥಿಕತೆಯನ್ನು ನಿರಂತರವಾಗಿ ಧ್ವಂಸಮಾಡುತ್ತಲೇ ಇರುತ್ತದೆ. ಹೀಗಿದ್ದರೂ ಸಮಾಜಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಮದ್ಯಸೇವನೆಯನ್ನು ಬಿಡಬೇಕೆಂದು ವ್ಯಸನಿಗಳಿಗೆ ಉಪದೇಶಿಸುತ್ತಾರೆಯೇ ಹೊರತು ಮದ್ಯದ ಉತ್ಪಾದನೆಯನ್ನೇ ರದ್ದುಮಾಡಬೇಕೆಂದು ಯಾರೊಬ್ಬರೂ ಆಗ್ರಹಿಸುವುದಿಲ್ಲ. ಸರಕಾರಗಳ ಮೇಲೆ ಒತ್ತಡ ತರುವುದಿಲ್ಲ. ಚಿತ್ರದುರ್ಗದ ಸಮೀಪದ ಹಳ್ಳಿಗಳಿಂದ ಮದ್ಯವ್ಯಸನಿಗಳ ಕುಟುಂಬಗಳ ಸಂತ್ರಸ್ತ ಮಹಿಳೆಯರು ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಜಾಥಾ ನಡೆಸಿ ಮುಖ್ಯಮಂತ್ರಿಗಳಿಂದ ಯಾವ ಸಹಾಯವೂ ಸಿಗದೆ ಅಸಹಾಯಕರಾಗಿ ವಾಪಸಾದಾಗ ಮದ್ಯವರ್ಜನೆಯ ಪ್ರಚಾರ ಪಡೆಯುವ ಯಾರೂ, ಯಾವ ಸಮಾಜಸೇವಾಕ ಸಂಸ್ಥೆಯೂ ತುಟಿ ಬಿಚ್ಚಲಿಲ್ಲ.

ಮದ್ಯದ ಉದ್ಯಮವನ್ನೇ ರದ್ದುಮಾಡಿದರೆ, ಲಕ್ಷಾಂತರ ಬಡ ಕುಟುಂಬಗಳ ಹೆಂಗಸರು-ಮಕ್ಕಳ ನಿತ್ಯಕಷ್ಟಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಮದ್ಯದ ಉದ್ಯಮಿಗಳ ಅನೈತಿಕ ಶ್ರೀಮಂತಿಕೆ, ಅಧಿಕಾರಿಗಳ ಲಂಚಾದಾಯ, ಸರಕಾರಗಳ ಜನವಿರೋಧಿ ತೆರಿಗೆಹಣಕ್ಕೆ ಸಂಚಕಾರ ಬರುವುದಲ್ಲದೆ ಕಪ್ಪುಹಣದ ಸಂಗ್ರಹವನ್ನು ಕೆಲಮಟ್ಟಿಗಾದರೂ ನಿಯಂತ್ರಿಸಿದಂತಾಗುತ್ತದೆ. ಇದಲ್ಲದೆ, ಮದ್ಯ ಸಂಬಂಧಿ ಅಪರಾಧ, ಅಪಘಾತ, ದುರ್ಮರಣ ಮತ್ತು ಆರೋಗ್ಯ ಸಮಸ್ಯೆಗಳು ಇಳಿಮುಖವಾಗುತ್ತವೆ ಎಂಬುದು ಎಲ್ಲಾ ಸರಕಾರಗಳಿಗೂ, ಆಡಳಿತಗಾರರಿಗೂ, ಸಮಾಜಸೇವಾ ಸಂಸ್ಥೆಗಳಿಗೂ ಗೊತ್ತಿರುವ ಸಂಗತಿಯೇ. ಹೀಗಿದ್ದರೂ ಮದ್ಯದ ತಯಾರಿಕೆಯನ್ನೇ ರದ್ದುಮಾಡಲು ತಮ್ಮ ಎಲ್ಲಾ ಶಕ್ತಿಯನ್ನೂ ಬಳಸದೆ, ಕೇವಲ ಬಡಜನರಿಗೆ ಮದ್ಯಸೇವನೆಯನ್ನು ಬಿಡಿ ಎಂದು ಉಪದೇಶಿಸುವುದು ವ್ಯಕ್ತಿಗಳಿಗಾಗಲಿ, ಸಂಸ್ಥೆಗಳಿಗಾಗಲಿ ಕೇವಲ ಬಳಸುರೀತಿಗಳಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಚಾರದ ಸಾಧನವಾಗುತ್ತದೆಯೇ ಹೊರತು ಮತ್ತೇನೂ ಅಲ್ಲ.
-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News