"ನಾವು ಅಧಿಕಾರಕ್ಕೆ ಬಂದರೆ 50ರೂ.ಗೆ ಒಂದು ಬಾಟಲ್‌ ಮದ್ಯ": ಆಂಧ್ರದಲ್ಲಿ ಬಿಜೆಪಿ ಆಶ್ವಾಸನೆ

Update: 2021-12-29 09:39 GMT

ಅಮರಾವತಿ, ಡಿ.29: ಆಂಧ್ರಪ್ರದೇಶದಲ್ಲಿ ಬಿಜೆಪಿಯು 2024ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಹಲವಾರು ಸೌಲಭ್ಯಗಳ ಜೊತೆಗೆ ಪ್ರತಿ ಬಾಟಲಿ ಮದ್ಯಕ್ಕೆ 50 ರೂ.ಗೆ ನಿಗದಿಪಡಿಸುವುದಾಗಿ ಭರವಸೆ ನೀಡಿದೆ.

ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಮುಖ್ಯಸ್ಥ ಸೋಮು ವೀರಾಜು, ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ತೆಲುಗು ದೇಶಂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ, ಈ ರಾಜ್ಯದಲ್ಲಿ ಹೇರಳ ಸಂಪನ್ಮೂಲಗಳಿದ್ದರೂ ರಾಜ್ಯದ ರಾಜಕೀಯ ಶಕ್ತಿಗಳು ನಾಡಿನ ಅಭಿವೃದ್ಧಿಯಲ್ಲಿ ವಿಫಲವಾಗಿವೆ ಎಂದು ಹೇಳಿದರು. 

“ರಾಜ್ಯದಲ್ಲಿ ಒಂದು ಕೋಟಿ ಜನರು (ಮದ್ಯ) ಕುಡಿಯುತ್ತಿದ್ದಾರೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. ನೀವೆಲ್ಲರೂ ಬಿಜೆಪಿಗೆ ಮತ ಹಾಕಿದರೆ 75 ರೂ.ಗೆ ಅಗ್ಗದ ಮದ್ಯ ನೀಡುತ್ತೇವೆ. ಆದಾಯ ಚೆನ್ನಾಗಿದ್ದರೆ ಕೇವಲ 50 ರೂ.ಗೆ (ಕೆಟ್ಟ ಮದ್ಯವಲ್ಲ) ಪೂರೈಕೆ ಮಾಡುತ್ತೇವೆ ಎಂದು ರಾಜ್ಯದಲ್ಲಿ ಹೆಚ್ಚಾಗಿರುವ ಮದ್ಯದ ಬೆಲೆಯನ್ನು ವೀರರಾಜು ಪರೋಕ್ಷವಾಗಿ ಸೂಚಿಸಿದರು.

ರಾಜ್ಯ ಸರ್ಕಾರದ ಕೆಲವು ನೇರ ಲಾಭ ವರ್ಗಾವಣೆ ಯೋಜನೆಗಳನ್ನು ಉಲ್ಲೇಖಿಸಿದ ಬಿಜೆಪಿ ನಾಯಕ, ಒಬ್ಬ ವ್ಯಕ್ತಿಯು ತಿಂಗಳಿಗೆ ಸರಾಸರಿ 12000 ರೂ.ಗೆ ಮದ್ಯವನ್ನು ಸೇವಿಸುತ್ತಾನೆ ಮತ್ತು ಜಗನ್ ಮೋಹನ್ ರೆಡ್ಡಿ ಆ ಮೊತ್ತವನ್ನು ಸಂಗ್ರಹಿಸಿ ಯೋಜನೆಯ ಹೆಸರಿನಲ್ಲಿ ಹಿಂತಿರುಗಿಸುತ್ತಿದ್ದಾರೆ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಕೇವಲ ಮೂರು ವರ್ಷಗಳಲ್ಲಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಮತ್ತು ಪ್ರದೇಶವನ್ನು ಅಭಿವೃದ್ಧಿಪಡಿಸಲು ಬಿಜೆಪಿ ಬದ್ಧವಾಗಿದೆ ಎಂದು ವೀರರಾಜು ಪ್ರತಿಪಾದಿಸಿದರು.

ಕಮ್ಯುನಿಸ್ಟರನ್ನು 'ಬೊಗಳುವ ನಾಯಿಗಳು' ಎಂದು ಬಣ್ಣಿಸಿದ ವೀರರಾಜು, ಎಡಪಕ್ಷಗಳು ದೇಶವನ್ನು ನಾಶಪಡಿಸಿವೆ ಎಂದು ಆರೋಪಿಸಿದರು. ಸಭೆಯಲ್ಲಿ ಮಾಜಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಪುರಂದರೇಶ್ವರಿ, ರಾಜ್ಯಸಭಾ ಸದಸ್ಯರಾದ ವೈಎಸ್ ಚೌಧರಿ, ಎಂಸಿ ರಮೇಶ್ ಉಪಸ್ಥಿತರಿದ್ದು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News