ಕೋಳಿ ಮಾರಾಟ ನಿಲ್ಲಿಸಿ, ಇಲ್ಲದೇ ಹೋದರೆ ಜೈಲಿಗೆ ಹೋಗುತ್ತೀರಿ: ಲೋನಿ ಬಿಜೆಪಿ ಶಾಸಕನಿಂದ ಬೆದರಿಕೆ

Update: 2021-12-29 11:35 GMT
Photo: Video Screengrab

ಹೊಸದಿಲ್ಲಿ: ತಮ್ಮ ಕ್ಷೇತ್ರದಲ್ಲಿ ಕೋಳಿ ಮಾರಾಟ ಮಾಡುವ ಹಾಗಿಲ್ಲ ಎಂದು  ಗಾಝಿಯಾಬಾದ್‍ನ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್  ಅವರು ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೋಮವಾರ ಲೋನಿ ಗಡಿ ಭಾಗಕ್ಕೆ ಆಗಮಿಸಿದ ಶಾಸಕ ಅಲ್ಲಿ ಕೋಳಿ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರುಗಳಿಗೆ ಬೆದರಿಕೆಯೊಡ್ಡಿ ಇನ್ನು ಮುಂದೆ ಅಲ್ಲಿ ಕೋಳಿ ಮಾರಾಟಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

"ಇಲ್ಲಿ ಕೇಳಿ, ಇದನ್ನೆಲ್ಲಾ ನಿಲ್ಲಿಸಿ, ಓಡಿ ಹೋಗಿ ಇಲ್ಲವೇ ನೀವು ಜೈಲಿಗೆ ಹೋಗುತ್ತೀರಿ. ಎಷ್ಟೇ ಬೆಲೆ ತೆತ್ತರೂ ಜಾಮೀನು ದೊರಕುವುದಿಲ್ಲ" ಎಂದು ಒಬ್ಬ ಅಂಗಡಿ ಮಾಲೀಕನನ್ನು ಉದ್ದೇಶಿಸಿ ಶಾಸಕ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

"ಈ ಅಕ್ರಮ ವಹಿವಾಟನ್ನು ಇಲ್ಲಿ ನಿಲ್ಲಿಸಿ, ನಾಳೆ ಇಲ್ಲಿ ಇವುಗಳು ಕಾಣಬಾರದು, ದಿಲ್ಲಿಗೆ ಹೋಗಿ ಮಾರಾಟ ಮಾಡಿ, ಲೋನಿ ಕ್ಷೇತ್ರದಲ್ಲಿ ಕೋಳಿ ಮಾರಾಟ ಮಾಡುವ ಹಾಗಿಲ್ಲ" ಎಂದು ಅವರು ಹೇಳಿದ್ದಾರೆ.

ಅಂಗಡಿ ಮುಚ್ಚಲು ಸೂಚಿಸಿ ನಂತರ ಸ್ಥಳೀಯರನ್ನುದ್ದೇಶಿಸಿ "ನಿಮಗೆ  ಕೆಟ್ಟ ವಾಸನೆ ಬರುವುದಿಲ್ಲವೇ" ಎಂದು ಅವರು ಕೇಳುತ್ತಾರೆ. ಆದರೆ ಜನರೇನು ಉತ್ತರ ನೀಡಿದ್ದಾರೆಂಬುದು ಸ್ಪಷ್ಟವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News