ಹೈದರ್‌ಪೊರಾ ಎನ್ಕೌಂಟರ್ ಪ್ರಕರಣ: ಸಿಟ್ ನಿಂದ ಪೊಲೀಸರಿಗೆ ಕ್ಲೀನ್ ಚಿಟ್ ಗೆ ಫಾರೂಕ್ ಅಬ್ದುಲ್ಲಾ ಆಕ್ಷೇಪ
ಶ್ರೀನಗರ,ಡಿ.30: ಹೈದರ್‌ಪೊರಾ ಎನ್ಕೌಂಟರ್ ಪ್ರಕರಣದಲ್ಲಿ ಜಮ್ಮುಕಾಶ್ಮೀರದ ಭದ್ರತಾಪಡೆಗಳಿಗೆ ಪೊಲೀಸರ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿರುವುದು ತಪ್ಪೆಂದು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
‘‘ಪೊಲೀಸರು ತಪ್ಪು ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸರು ಹಾಗೆ ಮಾಡಿದ್ದಾರೆ. ಪೊಲೀಸರೇ ನಾಗರಿಕರನ್ನು ಹತ್ಯೆಗೈದಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪಾರೂಕ್ ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹೈದರ್‌ಪೊರಾ ಎನ್ಕೌಂಟರ್ ಘಟನೆಯ ಹಿಂದಿರುವ ಸತ್ಯಸಂಗತಿಯನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
‘‘ಜನರ ಹೃದಯಕ್ಕೆ ನೋವುಂಟು ಮಾಡುವ ಇಂತಹ ಕೆಲಸವನ್ನು ಪೊಲೀಸರು ಮಾಡಬಾರದೆಂದು, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಫಾರೂಕ್ ಅಬ್ದುಲ್ಲಾ ತಿಳಿಸಿದರು. ಹೈದರ್ಪೊರಾ ಎನ್ಕೌಂಟರ್ ನಲ್ಲಿ ಮೂವರು ನಾಗರಿಕರು ಭದ್ರತಾಪಡೆಗಳ ಗುಂಡಿಗೆ ಬಲಿಯಾದರು.
ಪುನರ್ವಿಂಗಡಣಾ ಆಯೋಗದ ಕರಡು ವರದಿಯ ಬಗ್ಗೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ ಅವರು, ವರದಿ ಬಗ್ಗೆ ನ್ಯಾಶನಲ್ ಕಾನ್ಫರೆನ್ಸ್ ಉತ್ತರವೊಂದನ್ನು ಸಿದ್ಧಪಡಿಸಿದ್ದು, ಅದನ್ನು ಶೀಘ್ರದಲ್ಲೇ ಸಲ್ಲಿಸಲಿದೆ ಎಂದರು.