ಬಿಹಾರ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಅಮೀರ್‌ ಸುಭಾನಿ: ‌ಮಿತ್ರಪಕ್ಷ ಬಿಜೆಪಿಗೆ ಪರೋಕ್ಷ ಸಂದೇಶ ನೀಡಿದರೇ ನಿತೀಶ್‌?

Update: 2022-01-01 14:09 GMT
ಪೊಲೀಸರೊಂದಿಗೆ ಅಮೀರ್‌ ಸುಭಾನಿ (ಎಡಬದಿಯಿಂದ ಮೊದಲನೇ ವ್ಯಕ್ತಿ) Photo: ANI

ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಅಮೀರ್‌ ಸುಭಾನಿ ಅವರನ್ನು ನೇಮಿಸಿರುವುದು, ಮೈತ್ರಿ ಪಕ್ಷ ಬಿಜೆಪಿಗೆ ಸಾಕಷ್ಟು ಇರಿಸು-ಮುರಿಸು ತಂದಿದೆ ಎಂದು theprint.in ವರದಿ ಮಾಡಿದೆ. 

ಮುಖ್ಯಮಂತ್ರಿ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಎಂದಿಗೂ ಬೇಧ ಮಾಡುವುದಿಲ್ಲ ಎಂಬ ಸಂದೇಶವನ್ನು ಮಿತ್ರಪಕ್ಷ ಬಿಜೆಪಿಗೆ ರವಾನಿಸಲೆಂದೇ ಮುಸ್ಲಿಂ ಸಮುದಾಯದ ಸುಭಾನಿ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
 
ಸುಭಾನಿ ಅವರನ್ನು ಗುರುವಾರ ಹುದ್ದೆಗೆ ನೇಮಿಸಲಾಗಿದ್ದು, ಶನಿವಾರದಂದು ಅವರು ಸೇವೆಗೆ ಹಾಜರಾಗಿದ್ದಾರೆ. ಅದುವರೆಗೂ ಓರ್ವ ಮುಸ್ಲಿಂ ವ್ಯಕ್ತಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಅದಾಗ್ಯೂ, ಮುಖ್ಯ ಕಾರ್ಯದರ್ಶಿಯಾಗಿ ಯಾರನ್ನಾದರೂ ನೇಮಿಸಿಕೊಳ್ಳುವ ವಿಶೇಷ ಅಧಿಕಾರ ಮುಖ್ಯಮಂತ್ರಿಗೆ ಇದೆ ಎಂದು ಬಿಜೆಪಿ ಹೇಳಿಕೊಂಡಿದೆ. 

1987 ರ ಬ್ಯಾಚ್‌ನ ಐಎಎಸ್‌ ಟಾಪರ್‌ ಆಗಿರುವ ಅಮೀರ್‌ ಸುಭಾನಿ, ತಮ್ಮ ಸೇವಾಪರತೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಅಧಿಕಾರಿ ವಲಯದಲ್ಲಿ ಸಾಕಷ್ಟು ಚಿರಪರಿಚಿತರು. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳ ಆಪ್ತ ಕೆಲವೇ ಕೆಲವು ಅಧಿಕಾರಿಗಳ ಪಟ್ಟಿಯಲ್ಲಿ ಇವರ ಹೆಸರೂ ಇದೆ ಎಂದು ಸುಭಾನಿ ಸಹೋದ್ಯೋಗಿಗಳು ಹೇಳುವುದಾಗಿ ವರದಿ ಹೇಳಿದೆ. 

90 ರ ದಶಕದಲ್ಲಿ ಭೋಜ್‌ಪುರ್‌ ನ ಜಿಲ್ಲಾಧಿಕಾರಿಯಾಗಿದ್ದ ಸುಭಾನಿ, ಜಿಲ್ಲೆಯಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (Marxist-Leninist) (CPI M-L) ಹಾಗೂ ರಣವೀರ್‌ ಸೇನಾ ನಡುವೆ ಸುದೀರ್ಘ ಜಾತಿ ಸಂಘರ್ಷವನ್ನು ಸಮರ್ಥವಾಗಿ ನಿಭಾಯಿಸಿ ದಕ್ಷತೆ ಮೆರೆದಿದ್ದರು. ಈ ಸಂಧರ್ಭದಲ್ಲಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವು ರಾಜಕಾರಣಿಗಳ ಗಮನವನ್ನು ಸುಭಾನಿ ಸೆಳೆದಿದ್ದರು. ಬಳಿಕ ಹೋಂ ಕಮಿಷನರ್‌ ಮೊದಲಾದ ಉನ್ನತ ಹುದ್ದೆಯನ್ನು ಸುಭಾನಿ ಅಲಂಕರಿಸಿದ್ದರು. 

ಸುಭಾನಿ ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಅಧಿಕಾರಿ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ಮುಖ್ಯ ಕಾರ್ಯದರ್ಶಿಯಾಗಿ ಅವರ ನೇಮಕಾತಿಯು ನಿತೀಶ್‌ ಕುಮಾರ್‌ ಅವರ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದ್ದೂ, ಸಾಂಕೇತಿಕವಾಗಿಯೂ ದಿಟ್ಟತನದಿಂದ ಕೂಡಿದೆ ಎಂದು ಜೆಡಿಯು ಜನರಲ್‌ ಸೆಕ್ರೆಟರಿ ಕೆ.ಸಿ ತ್ಯಾಗಿ ಅಭಿಪ್ರಾಯಪಟ್ಟಿದ್ದಾರೆ.  

ಈ ಮೂಲಕ ಮುಖ್ಯಮಂತ್ರಿ ತಾವು ಯಾವುದೇ ರೀತಿಯ ಜಾತಿ-ಧರ್ಮಾಧರಿತ ಬೇಧಬಾವ ಮಾಡುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಸುಭಾನಿ ಬಿಹಾರದ ಮೊದಲ ಮುಸ್ಲಿಂ ಮುಖ್ಯ ಕಾರ್ಯದರ್ಶಿಯಾಗಿದ್ದು, ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿರುವ ಒಬ್ಬನೇ ಒಬ್ಬ ಮುಖ್ಯ ಕಾರ್ಯದರ್ಶಿಯಾಗಿದ್ದಾರೆಂದು ತ್ಯಾಗಿ ತಿಳಿಸಿದ್ದಾರೆ.

ನಿತೀಶ್‌ ಕುಮಾರ್‌ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬ ಅಧಿಕಾರಿಯನ್ನಾದರೂ ಮುಖ್ಯ ಹುದ್ದೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿಯೂ ಪ್ರಿಂಟ್‌ ವರದಿಯಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News