ಬಿಜೆಪಿ ಜೊತೆ ಚುನಾವಣಾ ಮೈತ್ರಿಗೆ ಮುಂದಾಗದ ಜೆಡಿಯು

Update: 2022-01-16 17:18 GMT

ಪಟ್ನಾ, ಜ.16: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನನ್ನು ಮಿತ್ರಪಕ್ಷವೆಂದು ಪರಿಗಣಿಸದಿರುವ ಹಿನ್ನೆಲೆಯಲ್ಲಿ ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಬಿಹಾರದ ಆಡಳಿರೂಢ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಜೆಡಿಯು ಪಾಲುದಾರ ಪಕ್ಷಗಳಾಗಿವೆ.

ಲಕ್ನೋದಲ್ಲಿ ಜನವರಿ 18ರಂದು ತನ್ನ ಪಕ್ಷದ ಹಿರಿಯ ನಾಯಕರ ಸಭೆ ನಡೆಯಲಿದ್ದು, ಆ ದಿನವೇ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜೆಡಿಯು ಉತ್ತರಪ್ರದೇಶ ಘಟಕದ ಅಧ್ಯಕ್ಷ ಅನೂಪ್ ಸಿಂಗ್ ಪಟೇಲ್ ಶನಿವಾರ ತಿಳಿಸಿದ್ದಾರೆ.
ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸಂದರ್ಭ ಉತ್ತರಪ್ರದೇಶದಲ್ಲಿ ಜೆಡಿಯು ಪಕ್ಷವನ್ನು ಮಿತ್ರಪಕ್ಷವೆಂದು ಹೆಸರಿಸಿಲ್ಲವಾದ್ದರಿಂದ ಅದು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಪಟೇಲ್ ತಿಳಿಸಿದರು.
 
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸಂದರ್ಭ ನ್ನ ಪಕ್ಷವು ಆ ರಾಜ್ಯದಲ್ಲಿ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾದಳ ಹಾಗೂ ಸಂಜಯ್ ನಿಶಾದ್ ನೇತೃತ್ವ ದ ನಿಶಾದ್ ಪಕ್ಷದ ಜೊತೆ ಮಾತ್ರ ಚುನಾವಣಾ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.

ಜೆಡಿಯು ಪಕ್ಷವು ಬಿಹಾರ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಜೊತೆಗಾರ ಪಕ್ಷವಾಗಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಚುನಾವಣಾ ಮೈತ್ರಿಯೇರ್ಪಡಿಸಿಕೊಳ್ಳುವ ಮತ್ತು ಸೀಟು ಹಂಚಿಕೆ ಕುರಿತಾಗಿ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಜೆಡಿಯು, ತನ್ನ ಹಿರಿಯ ನಾಯಕ ಹಾಗೂ ಕೇಂದ್ರ ಉಕ್ಕು ಸಚಿವ ಆರ್.ಸಿ.ಪಿ.ಸಿಂಗ್ ಅವರಿಗೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News