ಗಣರಾಜ್ಯೋತ್ಸವ ಪರೇಡ್: ಪಶ್ಚಿಮ ಬಂಗಾಳದ ಟ್ಯಾಬ್ಲೊಗೆ ಅನುಮತಿ ನೀಡದ ಕೇಂದ್ರ

Update: 2022-01-16 17:21 GMT

ಕೋಲ್ಕತಾ, ಜ.16: ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಶ್ಚಿಮಬಂಗಾಳದ ಪ್ರಸ್ತಾವಿತ ಸ್ತಬ್ಧಚಿತ್ರ (ಟ್ಯಾಬ್ಲೋ)ವನ್ನು ಅನುಮತಿ ನೀಡದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಕೋರಿ ಪಶ್ಚಿಮಬಂಗಾಳ ಮಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

‘‘ಯಾವುದೇ ಕಾರಣಗಳನ್ನು ಅಥವಾ ಸಮರ್ಥನೆಗಳನ್ನು ನೀಡದೆಯೇ ಟ್ಯಾಬ್ಲೊವನ್ನು ತಿರಸ್ಕರಿಸಿರುವುದು ಇನ್ನೂ ಹೆಚ್ಚು ದಿಗ್ಭ್ರಮೆ ಮೂಡಿಸಿದೆ’’ ಎಂದವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ತನಗೆ ಆಘಾತವಾಗಿ ಹಾಗೂ ನೋವಾಗಿದೆ ಎಂದವರು ಹೇಳಿದ್ದಾರೆ.

ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿಯ 125ನೇ ವರ್ಷಾಚರಣೆಯ ಸ್ಮರಣಾರ್ಥವಾಗಿ ಪ್ರಸ್ತಾವಿತ ಟ್ಯಾಬ್ಲೊವನ್ನು ಪಶ್ಚಿಮಬಂಗಾಳ ಸರಕಾರವು ಹೊಸದಿಲ್ಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರದರ್ಶಿಸಲು ನಿರ್ಧರಿಸಿತ್ತು. ಈ ಟ್ಯಾಬ್ಲೊ ದಲ್ಲಿ ಈಶ್ವರಚಂದ್ರ ವಿದ್ಯಾಸಾಗರ, ರಬೀಂದ್ರನಾಥ ಠಾಗೋರ್, ವಿವೇಕಾನಂದ, ಚಿತ್ತರಂಜನ್ದಾಸ್, ಶ್ರೀ ಅರಬಿಂದೊ, ಮಾತಂಗಿನಿ ಹಝ್ರಾ, ಬಿರ್ಸಾ ಮುಂಡಾ, ನಝ್ರುಲ್ ಇಸ್ಲಾಂ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಿತ್ತು ಎಂದು ಮಮತಾ ಪತ್ರದಲ್ಲಿ ಬರೆದಿದ್ದಾರೆ.
 
‘‘ಕೇಂದ್ರ ಸರಕಾರದ ಈ ವರ್ತನೆಯಿಂದ ಪಶ್ಚಿಮಬಂಗಾಳದ ಎಲ್ಲಾ ಜನತೆ ತೀವ್ರವಾಗಿ ನೊಂದಿದ್ದಾರೆ. ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಪಶ್ಚಿಮ ಬಂಗಾಳವು ಮುಂಚೂಣಿಯಲ್ಲಿತ್ತು ಹಾಗೂ ವಿಭಜನಗೊಳ್ಳುವುದರ ಮೂಲಕ ಅದು ದೇಶದ ಸ್ವಾತಂತ್ರಕ್ಕಾಗಿ ದೊಡ್ಡ ಬೆಲೆಯನ್ನು ತೆತ್ತಿದೆ. ಇದು ಸುಭಾಶ್ ಚಂದ್ರ ಬೋಸ್ರಿಗೆ ಮಾಡಿದ ಅವಮಾನ  ಎಂದು ಮಮತಾ ತಿಳಿಸಿದರು.

ಕಳೆದ ಕೆಲವು ವರ್ಷಗಳಿಂದ ಪಶ್ಚಿಮಬಂಗಾಳದ ಗಣರಾಜ್ಯೋತ್ಸವ ಟ್ಯಾಬ್ಲೊವನ್ನು ಕೇಂದ್ರ ಸರಕಾರ ತಿರಸ್ಕರಿಸುತ್ತಿರುವುದು ಇದು ನಾಲ್ಕನೆ ಸಲವಾಗಿದೆ. 2015,2017 ಹಾಗೂ 2020ರಲ್ಲಿಯೂ ಪಶ್ಚಿಮಬಂಗಾಳದ ಟ್ಯಾಬ್ಲೊ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರದ ತಿರಸ್ಕರಿಸಿತ್ತು.
 ಮಮತಾ ಅವರಿಗಿಂತ ಮೊದಲು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಪತ್ರ ಬರೆದು ಪಶ್ಚಿಮಬಂಗಾಳದ ಟ್ಯಾಬ್ಲೊವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News