ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ 1 ವರ್ಷ: ಈತನಕ 156.76 ಕೋಟಿ ಡೋಸ್ ಗಳ ನೀಡಿಕೆ

Update: 2022-01-17 02:02 GMT

ಹೊಸದಿಲ್ಲಿ, ಜ.16: ಕೋವಿಡ್19 ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನವು ರವಿವಾರ ಒಂದು ವರ್ಷವನ್ನು ಪೂರ್ತಿಗೊಳಿಸಿದೆ. ಈ ಅವಧಿಯಲ್ಲಿ 156.76 ಕೋಟಿ ಡೋಸ್ ಗಳನ್ನು ನೀಡಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ದೇಶದ ಶೇ.92ರಷ್ಟು ವಯಸ್ಕ ಜನಸಂಖ್ಯೆಯು ಕನಿಷ್ಠ 1 ಡೋಸ್ ಲಸಿಕೆಯನ್ನು ಪಡೆದಿದ್ದರೆ, ಶೇ.68ಕ್ಕೂ ಅಧಿಕ ಜನಸಂಖ್ಯೆಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರಕಾರ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ದೇಶದಲ್ಲಿ ಲಸಿಕೀಕರಣ ಅಭಿಯಾನಕ್ಕೆ ಒಂದು ವರ್ಷ ತುಂಬಿರುವ ಸ್ಮರಣಾರ್ಥವಾಗಿ ಕೇಂದ್ರ ಸರಕಾರವು ಅಂಚೆ ಚೀಟಿಯೊಂದನ್ನು ರವಿವಾರ ಬಿಡುಗಡೆಗೊಳಿಸಿದೆ. ಕಳೆದ ವರ್ಷದ ಜನವರಿ 16ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗಿತ್ತು. ಕೋವಿಡ್19 ವಿರುದ್ಧ ಹೋರಾಟದ ಎಲ್ಲಾ ಮುಂಚೂಣಿ ಕಾರ್ಯಕರ್ತರ ಲಸಿಕೀಕರಣ ಅಭಿಯಾನವು ಫೆಬ್ರವರಿ 2ರಂದು ಆರಂಭಗೊಂಡಿತ್ತು.

ಕೋವಿಡ್19 ಲಸಿಕೀಕರಣ ಅಭಿಯಾನದ ಮೂರನೆ ಹಂತದ ಅಭಿಯಾನದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ನಿರ್ದಿಷ್ಟವಾದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವ 45 ವರ್ಷದ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆಯನ್ನು ನೀಡಲಾಯಿತು.
ಎಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೀಕರಣ ಆರಂಭಗೊಂಡಿತು. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರನ್ನೂ ಲಸಿಕೀಕರಣದ ವ್ಯಾಪ್ತಿಗೆ ತರುವ ಅಭಿಯಾನವು ಮೇ 1ರಿಂದ ಆರಂಭವಾಯಿತು.
       
ಈ ವರ್ಷದ ಜನವರಿ 3ರಿಂದ 15-18 ವರ್ಷ ವಯೋಮಾನದ ಎಲ್ಲರಿಗೂ ಲಸಿಕೀಕರಣ ಅಭಿಯಾನ ಆರಂಭಗೊಂಡಿತು. ಕಡಿಮೆ ಜನಸಂಖ್ಯೆಯಿರು ಹಾಗೂ ಅಭಿವೃದ್ಧಿ ಹೊಂದಿದ ಹಲವಾರು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಬೃಹತ್ ಜನಸಂಖ್ಯೆಯಿರುವ ಭಾರತದಲ್ಲಿ ಲಸಿಕೀಕರಣ ಅಭಿಯಾನವು ಅತ್ಯಂತ ಯಶಸ್ವಿ ಹಾಗೂ ಬೃಹತ್ ಕಾರ್ಯಕ್ರಮವಾಗಿತ್ತು ಎಂದು ಆರೋಗ್ಯ ಸಚಿವಾಲಯ ಇಂದು ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.43.19 ಲಕ್ಷಕ್ಕೂ ಅಧಿಕ ಮುನ್ನೆಚ್ಚರಿಕಾ ಡೋಸ್ಗಳನ್ನು ನೀಡಲಾಗಿದೆ. 15ರಿಂದ 18 ವಯೋಮಾನದ ಫಲಾನುಭವಿಗಳಗೆ 3,38,50,912 ಮೊದಲ ಡೋಸ್ಗಳನ್ನು ನೀಡಲಾಗಿದೆ.

ಲಸಿಕೀಕರಣ: ಭಾರತದ ಸಾಧನೆಯ ಮೈಲುಗಲ್ಲುಗಳು

ಲಸಿಕೀಕರಣ ಅಭಿಯಾನದಲ್ಲಿ ಭಾರತವು ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. 9 ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ 100 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಒಂದೇ ದಿನದಲ್ಲಿ 2.5 ಕೋಟಿ ಹಾಗೂ ಹಲವು ದಿನಗಳಲ್ಲಿ 1 ಕೋಟಿಗೂ ಅಧಿಕ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೋವಿಡ್19 ಲಸಿಕೆಯ ಡೋಸ್ಗಳ ನೀಡಿಕೆಯು ಕಳೆದ ವರ್ಷದ ಅಕ್ಟೋಬರ್ 21ರಂದು 100 ಕೋಟಿಯ ಗಡಿಯನ್ನು ದಾಟಿತ್ತ್ತು. ದಿನಂಪ್ರತಿ ಸರಾಸರಿ 66 ಲಕ್ಷ ಲಸಿಕೆಗಳ ನೀಡಿಕೆಯೊಂದಿಗೆ ಭಾರತವು ಈ ವರ್ಷದ ಜನವರಿ 16ರವರೆಗೆ 156.76 ಕೋಟಿ ಡೋಸ್ಗಳ ನೀಡಿಕೆಯನ್ನು ಪೂರ್ಣಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News