ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಬಹಿರಂಗಕ್ಕೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಪರಿಗಣಿಸಲಿರುವ ಸುಪ್ರೀಂ

Update: 2022-01-18 16:25 GMT

 ಹೊಸದಿಲ್ಲಿ,ಜ.18: ಚುನಾವಣೆಗಳಿಗೆ ಮುನ್ನ ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಮತ್ತು ಅವರ ಆಯ್ಕೆಗೆ ಕಾರಣಗಳಿಗೆ ಸಂಬಂಧಿಸಿದ ವಿವರಗಳನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ತಾನು ಪರಿಗಣಿಸಲಿದ್ದೇನೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.

ಹಾಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ವಿಚಾರಣೆಯನ್ನು ನಡೆಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ ಆಗ್ರಹಿಸಿದ್ದರು.

 ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭಗೊಂಡಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸರ್ವೋಚ್ಚ ನ್ಯಾಯಾಲಯದ ಎರಡು ತೀರ್ಪುಗಳನ್ನು ರಾಜಾರೋಷ ಉಲ್ಲಂಘಿಸುತ್ತಿದ್ದಾರೆ ಎಂದು ಉಪಾಧ್ಯಾಯ ತಿಳಿಸಿದಾಗ,‘ನಾವದನ್ನು ಪರಿಗಣಿಸುತ್ತೇವೆ. ನಾನು ದಿನಾಂಕವನ್ನು ನೀಡುತ್ತೇನೆ ’ಎಂದು ಮು.ನ್ಯಾ.ರಮಣ ಹೇಳಿದರು.

ರಾಜಕೀಯ ಪಕ್ಷಗಳ ವೆಬ್ ಸೈಟ್ ಗಳಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ಇತಿಹಾಸದ ಬಹಿರಂಗದ ಜೊತೆಗೆ, ಪ್ರತಿಯೊಬ್ಬ ಅಭ್ಯರ್ಥಿಯು ವಿದ್ಯುನ್ಮಾನ,ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿವರಗಳನ್ನು ಪ್ರಕಟಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಇಂತಹ ಆದೇಶಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷದ ಅಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡುವಂತೆಯೂ ಅರ್ಜಿಯು ಕೋರಿದೆ.

ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದಿಂದ ಗ್ಯಾಂಗ್ ಸ್ಟರ್ ನಾಹಿದ್ ಹಸನ್ ನನ್ನು ಕಣಕ್ಕಳಿಸಿದ ಬಳಿಕ ತಾನು ಈ ಅರ್ಜಿಯನ್ನು ಸಲ್ಲಿಸಿರುವುದಾಗಿ ತಿಳಿಸಿರುವ ಅರ್ಜಿದಾರರು,ಸರ್ವೋಚ್ಚ ನ್ಯಾಯಾಲಯದ ಈ ಹಿಂದಿನ ತೀರ್ಪಿಗೆ ಅನುಗುಣವಾಗಿ ಹಸನ್ ನನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಆತನ ಕ್ರಿಮಿನಲ್ ಇತಿಹಾಸವನ್ನಾಗಲೀ ಆತನ ಆಯ್ಕೆಗೆ ಕಾರಣಗಳನ್ನಾಗಲೀ ಪಕ್ಷವು ವಿದ್ಯುನ್ಮಾನ,ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿಲ್ಲ ಎಂದು ಬೆಟ್ಟು ಮಾಡಿದ್ದಾರೆ.

ಗ್ಯಾಂಗ್ ಸ್ಟರ್ ಕಾಯ್ದೆಯಡಿ ಬಂಧಿತನಾಗಿರುವ ಕೈರಾನಾದಿಂದ ಎರಡು ಸಲ ಶಾಸಕನಾಗಿ ಆಯ್ಕೆಯಾಗಿರುವ ಹಸನ್ ಕಳೆದ 11 ತಿಂಗಳುಗಳಿಂದಲೂ ಜೈಲಿನಲ್ಲಿದ್ದಾನೆ.

ಕ್ರಿಮಿನಲ್ ಗಳು ಚುನಾವಣೆಗಳಲ್ಲಿ ಸ್ಪರ್ಧಿಸಲು ಅನುಮತಿ ನೀಡುವುದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತವಾದದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News