ಸಾಲಬಾಕಿ ಪ್ರಕರಣ: ಲಂಡನ್ ಮನೆ ತೆರವುಗೊಳಿಸಲು ವಿಜಯ ಮಲ್ಯಗೆ ಬ್ರಿಟಿಷ್ ಹೈಕೋರ್ಟ್ ಆದೇಶ

Update: 2022-01-19 17:39 GMT
ವಿಜಯ ಮಲ್ಯ | Photo : PTI

ಹೊಸದಿಲ್ಲಿ,ಜ.19: ಬ್ರಿಟಿಷ್ ಹೈಕೋರ್ಟ್ ಸ್ವಿಸ್ ಬ್ಯಾಂಕ್ ಯುಬಿಎಸ್‌ಗೆ ಸಾಲಬಾಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಅವರ ವಿರುದ್ಧ ತೀರ್ಪು ನೀಡಿದ್ದು,ಅವರು ಲಂಡನ್‌ನಲ್ಲಿರುವ ತನ್ನ ವೈಭವೋಪೇತ ನಿವಾಸವನ್ನು ಕಳೆದುಕೊಳ್ಳಲಿದ್ದಾರೆ.

ಯುಬಿಎಸ್‌ಗೆ ತನ್ನ 20.4 ಮಿಲಿಯನ್ ಪೌಂಡ್ (206.79 ಕೋ.ರೂ.ಗೂ ಹೆಚ್ಚು) ಸಾಲಬಾಕಿಯನ್ನು ತೀರಿಸಲು ಮಲ್ಯಗೆ ಹೆಚ್ಚಿನ ಸಮಯಾವಕಾಶವನ್ನು ನೀಡಲು ಯಾವುದೇ ಕಾರಣಗಳಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಮಲ್ಯರ ಕಂಪನಿಗಳಲ್ಲೊಂದಾದ ರೋಸ್ ಕ್ಯಾಪಿಟಲ್ ವೆಂಚರ್ಸ್‌ನಿಂದ ಪಡೆದುಕೊಂಡ ಅಡಮಾನ ಸಾಲಕ್ಕೆ ಈ ಪ್ರಕರಣವು ಸಂಬಂಧಿಸಿದೆ. ಮಲ್ಯ,ಅವರ ತಾಯಿ ಲಲಿತಾ ರಾಮಯ್ಯ ಮಲ್ಯ ಮತ್ತು ಪುತ್ರ ಸಿದ್ಧಾರ್ಥ ಮಲ್ಯ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು.

ಲಂಡನ್ನಿನ ರೀಜೆಂಟ್ ಪಾರ್ಕ್ ಸಮೀಪದಲ್ಲಿರುವ ಮಲ್ಯ ಅವರ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ‘ಹತ್ತಾರು ಮಿಲಿಯನ್ ಪೌಂಡ್ ಮೌಲ್ಯದ ಅಮೂಲ್ಯ ಆಸ್ತಿ’ ಎಂದು ನ್ಯಾಯಾಲಯದಲ್ಲಿ ಬಣ್ಣಿಸಲಾಗಿತ್ತು.

 2019,ಮೇ ತಿಂಗಳಿನಲ್ಲಿ ನೀಡಿದ್ದ ತೀರ್ಪಿನಲ್ಲಿ ನ್ಯಾಯಾಲಯವು 2020,ಎ.30ರೊಳಗೆ ಯುಬಿಎಸ್‌ನ ಸಾಲಬಾಕಿಯನ್ನು ತೀರಿಸಿದರೆ ನಿವಾಸದ ಒಡೆತನವನ್ನು ಉಳಿಸಿಕೊಳ್ಳಲು ಮಲ್ಯ ಕುಟುಂಬಕ್ಕೆ ಅವಕಾಶ ನೀಡಿತ್ತು. ಗಡುವಿನಲ್ಲಿ ಸಾಲವನ್ನು ಮರುಪಾವತಿಸಲು ಮಲ್ಯ ವಿಫಲರಾಗಿದ್ದರಾದರೂ ಕೊರೋನವೈರಸ್ ನಿರ್ಬಂಧಗಳಿಂದಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಯುಬಿಎಸ್‌ಗೆ 2021 ಎಪ್ರಿಲ್‌ವರೆಗೂ ಸಾಧ್ಯವಾಗಿರಲಿಲ್ಲ.

 ಅಕ್ಟೋಬರ್‌ನಲ್ಲಿ ಬ್ಯಾಂಕ್ ಈ ವಿಷಯದಲ್ಲಿ ನ್ಯಾಯಾಲಯದ ಡಿಕ್ರಿ ಆದೇಶಕ್ಕಾಗಿ ಕೋರಿತ್ತು. ಆದರೆ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ತಡೆಯಾಜ್ಞೆಯನ್ನು ನೀಡುವಂತೆ ಕೋರಿ ಮಲ್ಯ ಅರ್ಜಿಯನ್ನು ಸಲ್ಲಿಸಿದ್ದರು. ಕುಟುಂಬದ ಟ್ರಸ್ಟ್‌ನ ನಿಧಿಯಿಂದ ಹಣವನ್ನು ಮರುಪಾವತಿಸುವ ತನ್ನ ಮಾರ್ಗದಲ್ಲಿ ಬ್ಯಾಂಕು ವಿನಾಕಾರಣ ಅಡೆತಡೆಗಳನ್ನೊಡ್ಡಿದೆ ಎಂದು ಅವರು ವಾದಿಸಿದ್ದರು. ಆಸ್ತಿಯನ್ನು ಖರೀದಿಸಲು ಕಂಪನಿಯೊಂದು ಸಿದ್ಧವಿದೆ ಎಂದು ಹೇಳಿಕೊಂಡಿದ್ದ ಪತ್ರವೊಂದನ್ನೂ ಅವರ ವಕೀಲರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.

ಮಂಗಳವಾರದ ವಿಚಾರಣೆ ಸಂದರ್ಭ ನ್ಯಾಯಾಧೀಶರು,ಯುಬಿಎಸ್‌ನ ನಿಲುವು ಸಕಾರಣವಾಗಿದೆ ಎಂದು ಎತ್ತಿ ಹಿಡಿದಿದ್ದು,ಸಾಲವನ್ನು ತೀರಿಸಲು ಮಲ್ಯಗೆ ಇನ್ನಷ್ಟು ಸಮಯಾವಕಾಶವನ್ನು ನೀಡುವುದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News