‘ಸಲ್ಲಿ ಡೀಲ್ಸ್’, ‘ಬುಲ್ಲಿ ಬಾಯ್’ ಪ್ರಕರಣ: ಪ್ರಮುಖ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳಿಂದ ಪ್ರಧಾನಿಗೆ ಪತ್ರ
ಹೊಸದಿಲ್ಲಿ, ಜ. 19: ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿರುವ ಕುರಿತು ವಿವಿಧ ಪ್ರಮುಖ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ ಹಾಗೂ ಸಂಸದರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಇಂತಹ ಪ್ರಕರಣಗಳನ್ನು ಖಂಡಿಸುವಂತೆ ಹಾಗೂ ಎಲ್ಲ ಮಹಿಳೆಯರ ಹಕ್ಕು ಹಾಗೂ ಗೌರವವನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಅವರು ನಾಯಕರನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗಿನ ‘ಸಲ್ಲಿ ಡೀಲ್ಸ್’ ಹಾಗೂ ‘ಬುಲ್ಲಿ ಬಾಯ್’ಯಂತಹ ಘಟನೆಗಳ ಹಿನ್ನೆಲೆಯಲ್ಲಿ ಅವರು ಈ ಪತ್ರ ಬರೆದಿದ್ದಾರೆ.
‘‘ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಧೈರ್ಯ ಮಾಡಿದ ಮಹಿಳೆಯರನ್ನು ಗುರಿಯಾಗಿರಿಸುವ ಸಂಸ್ಕೃತಿಯ ಅಭಿವ್ಯಕ್ತಿಗಳು ಇದು’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ವಿವಿಧ ಸ್ಥಳಗಳಲ್ಲಿ ಮಹಿಳೆಯರಿಗೆ ಬೆದರಿಕೆ ಹಾಗೂ ಕಿರುಕುಳದ ಘಟನೆಗಳು ಹೆಚ್ಚುತ್ತಿವೆ ಎಂದು ಪತ್ರ ಹೇಳಿದೆ. ಭಾರತದಲ್ಲಿ ಮಹಿಳೆಯರು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಈ ಹಿಂದಿಗಿಂತ ಈಗ ಹೆಚ್ಚು ಅಸುರಕ್ಷಿತರಾಗಿದ್ದಾರೆ. ದೈಹಿಕ ಹಲ್ಲೆ, ಲೈಂಗಿಕ ಹಿಂಸಾಚಾರದ ಬೆದರಿಕೆ ಹಾಗೂ ಗೌರವ, ಹಕ್ಕುಗಳ ಸಾರಾಸಗಟು ಉಲ್ಲಂಘನೆ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇದು ರಾಜಕೀಯ ನಾಯಕರಿಗೆ ಗಮನಕ್ಕೆ ಬರದೇ ಇರಲಾರದಷ್ಟು ಸಾಮಾನ್ಯವಾಗಿದೆ ಎಂದು ಪತ್ರ ಹೇಳಿದೆ.
ಮಹಿಳೆಯ ಅಸುರಕ್ಷೆಯ ಬಗ್ಗೆ ತಮ್ಮ ಮೌನ ಹಾಗೂ ನಿರಾಸಕ್ತಿಯಿಂದ ಹೊರಬರುವಂತೆ ನಾಯಕರನ್ನು ಪತ್ರ ಆಗ್ರಹಿಸಿದೆ. ‘‘ಈ ರೀತಿಯ ಮೌನದ ವಾತಾವರಣ ಅಪರಾಧಿ ಭಯವಿಲ್ಲದೆ ಮತ್ತೆ ಮತ್ತೆ ಇಂತಹ ಅಪರಾಧವನ್ನು ಎಸಗುವಂತೆ ಪ್ರೇರೇಪಿಸುತ್ತದೆ. ಅಲ್ಲದೆ, ದೇಶದಲ್ಲಿ ದ್ವೇಷ ಹಾಗೂ ವಿಭಜನೀಯ ವಾತಾವರಣ ಹೆಚ್ಚುತ್ತಿರುವುದು ಅವರಲ್ಲಿ ಇನ್ನಷ್ಟು ಧೈರ್ಯ ತುಂಬುತ್ತದೆ ಹಾಗೂ ಅವರು ಸ್ತ್ರೀದ್ವೇಷದ ಅಪರಾಧಗಳಿಗೆ ಯಾವುದೇ ಪಶ್ಚಾತ್ತಾಪ ತೋರಿಸುವುದಿಲ್ಲ’’ ಎಂದು ಪತ್ರ ಹೇಳಿದೆ.
ಐಆರ್‌ಎಂಎಯ ಹಳೆ ವಿದ್ಯಾರ್ಥಿಗಳು ಗುಂಪು ಆರಂಭಿಸಿದ ಈ ಬಹಿರಂಗ ಪತ್ರಕ್ಕೆ ದೇಶಾದ್ಯಂತದ ಶಿಕ್ಷಣ ಸಂಸ್ಥ್ಥೆಗಳ ಸಮಾನ ಮನಸ್ಕ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. 250ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.
ಈ ಪತ್ರವನ್ನು ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಆನಂದ (ಐಆರ್‌ಎಂಎ)ಯ ಹಳೆ ವಿದ್ಯಾರ್ಥಿಗಳು ಬರೆದಿದ್ದಾರೆ. ಇತರ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಲೇಡಿ ಶ್ರೀರಾಮ್ ಕಾಲೇಜು, ಐಐಟಿ ಬಾಂಬೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ), ಎಕ್ಸ್‌ಎಲ್‌ಆರ್‌ಐ, ಮಿರಾಂಡಾ ಹೌಸ್ ಮೊದಲಾದ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ.