ಉತ್ತರಾಖಂಡ ಕಾಂಗ್ರೆಸ್‌ನಿಂದ ಉಚ್ಚಾಟಿತ ಮಾಜಿ ಅಧ್ಯಕ್ಷ ಇಂದು ಬಿಜೆಪಿ ಸೇರುವ ಸಾಧ್ಯತೆ

Update: 2022-01-27 04:34 GMT

ಡೆಹ್ರಾಡೂನ್: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು, ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಅವರು ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಕಿಶೋರ್ ಉಪಾಧ್ಯಾಯ ಅವರನ್ನು ಕಾಂಗ್ರೆಸ್ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ವಜಾಗೊಳಿಸಿತ್ತು. ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಉತ್ತರಾಖಂಡ ಪಿಸಿಸಿ ಉಸ್ತುವಾರಿ ದೇವೆಂದರ್ ಯಾದವ್ ಅವರು ಉಪಾಧ್ಯಾಯ ಅವರಿಗೆ ಬರೆದ ಪತ್ರದಲ್ಲಿ, ಹಲವು ಎಚ್ಚರಿಕೆಗಳ ನಂತರ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್‌ನ ಎಲ್ಲಾ ಸ್ಥಾನಗಳಿಂದ ಉಪಾಧ್ಯಾಯ ಅವರನ್ನು ತೆಗೆದುಹಾಕಿದ್ದರಿಂದ ಈ ಕ್ರಮವನ್ನು ನಿರೀಕ್ಷಿಸಲಾಗಿತ್ತು.

ಕಿಶೋರ್ ಉಪಾಧ್ಯಾಯ ಅವರು 2014 ರಿಂದ 2017 ರವರೆಗೆ ಕಾಂಗ್ರೆಸ್‌ನ ಉತ್ತರಾಖಂಡ ಘಟಕದ ಅಧ್ಯಕ್ಷರಾಗಿದ್ದರು. ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News