ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಟ್ವಿಟರ್‌ ನಲ್ಲಿ ಬ್ಲಾಕ್‌ ಮಾಡಿದ ಮಮತಾ ಬ್ಯಾನರ್ಜಿ

Update: 2022-01-31 11:59 GMT

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ರಾಜ್ಯಪಾಲ ಜಗದೀಪ್‌ ದಂಖರ್‌ ಅವರನ್ನು ತಮ್ಮ ಟ್ವಿಟರ್‌ ಖಾತೆಯಿಂದ ನಿರ್ಬಂಧಿಸಿದ್ದಾರೆ ಎಂದು ndtv.com ವರದಿ ಮಾಡಿದೆ. ರಾಜ್ಯಪಾಲರು ಪಶ್ಚಿಮ ಬಂಗಾಳವು ʼಪ್ರಜಾಪ್ರಭುತ್ವದ ಗ್ಯಾಸ್‌ ಚೇಂಬರ್‌ʼ ಆಗಿದೆ ಎಂದು ಹೇಳಿದ ಬಳಿಕ ಮತ್ತೆ ಇವರಿಬ್ಬರ ನಡುವಿನ ಸಂಬಂಧ ಹದಗೆಟ್ಟಿದೆ ಎಂದು ತಿಳಿದು ಬಂದಿದೆ.

"ಇದಕ್ಕಾಗಿ ನಾನು ಮುಂಚಿತವಾಗಿ ಕ್ಷಮೆ ಯಾಚಿಸುತ್ತೇನೆ. ಅವರು ಪ್ರತಿದಿನ ನನ್ನನ್ನು ಅಥವಾ ಅಧಿಕಾರಿಗಳನ್ನು ನಿಂದಿಸುತ್ತಾ ಏನಾದರೊಂದು ಟ್ವೀಟ್‌ ಮಾಡುತ್ತಿರುತ್ತಾರೆ. ಅಸಾಂವಿಧಾನಿಕ, ಅನೈತಿಕ ವಿಷಯಗಳನ್ನು ಅವರು ಹೇಳುತ್ತಾರೆ. ಅವರು ಸೂಚನೆ ನೀಡುತ್ತಾರೆಯೇ ಹೊರತು ಸಲಹೆ ನೀಡುವುದಿಲ್ಲ. ಅದಕ್ಕಾಗಿಯೇ ನಾನು ಅವರನ್ನು ನನ್ನ ಟ್ವಿಟರ್‌ ಖಾತೆಯಿಂದ ನಿರ್ಬಂಧಿಸಿದ್ದೇನೆ. ಇದು ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.

ಧಂಖರ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹಲವಾರು ಸಂದರ್ಭಗಳಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ. ಧಂಖರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದು, ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News