×
Ad

ಜಿಎಸ್‌ಟಿಯಿಂದಾಗಿ ವ್ಯಾಪಾರದಲ್ಲಿ ಭಾರಿ ನಷ್ಟ: ಫೇಸ್‌ಬುಕ್‌ ಲೈವ್ ನಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ; ಪತ್ನಿ ಮೃತ್ಯು

Update: 2022-02-10 12:30 IST

ಮೀರತ್: "ಜಿಎಸ್‌ಟಿ ಜಾರಿಯಿಂದಾಗಿ ವ್ಯಾಪಾರದಲ್ಲಿ ಭಾರೀ ನಷ್ಟ" ಆಗಿದೆ ಎಂದು ಬರೌತ್‌ನ ದಂಪತಿಗಳು ಫೇಸ್‌ಬುಕ್‌ ಲೈವ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. 

ಚಿಕಿತ್ಸೆ ವೇಳೆ ಪತ್ನಿ ಸಾವನ್ನಪ್ಪಿದ್ದು, ಪತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಬರೌತ್ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮದನ್ ಸಿಂಗ್ ಹೇಳಿದ್ದಾರೆ.

ಚಪ್ಪಲಿ ವ್ಯಾಪಾರಿ ರಾಜೀವ್ ತೋಮರ್ ತನ್ನ ಪತ್ನಿ ಪೂನಂ ಜತೆ ಮಂಗಳವಾರ ವಿಷ ಸೇವಿಸಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ರಾಜೀವ್ ಅಳುತ್ತಾ ತಮ್ಮ ಸಂಕಷ್ಟವನ್ನು ಹಂಚಿಕೊಂಡರು.

"ನನಗೆ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾನು ಮಾಡಿರುವ ಸಾಲವನ್ನು ನಾನೇ ತೀರಿಸುತ್ತೇನೆ. ನಾನು ಸತ್ತರೂ ನಾನು ತೀರಿಸುತ್ತೇನೆ. ಆದರೆ ನಾನು ಈ ವೀಡಿಯೊವನ್ನು ಸಾಧ್ಯವಾದಷ್ಟು ಶೇರ್ ಮಾಡಬೇಕೆಂದು ವಿನಂತಿಸುತ್ತೇನೆ. ಆದರೆ ನಾನು 'ದೇಶ ವಿರೋಧಿ' ಅಲ್ಲ ನಾನು (ನರೇಂದ್ರ) ಮೋದಿಗೆ ಹೇಳಲು ಬಯಸುತ್ತೇನೆ. ನೀವು ಸಣ್ಣ ವ್ಯಾಪಾರಿಗಳು ಹಾಗೂ ರೈತರ ಹಿತೈಷಿಗಳಲ್ಲ, ನಿಮ್ಮ ನೀತಿಗಳನ್ನು ಬದಲಿಸಿಕೊಳ್ಳಿ,” ಎಂದು ಅವರು ವಿನಂತಿದರು ಎಂದು timesofindia ವರದಿ ಮಾಡಿದೆ.

ರಾಜೀವ್ ಬಿಜೆಪಿ ಬೆಂಬಲಿಗರಾಗಿದ್ದರು ಎಂದು ವರದಿಯಾಗಿದೆ.

"ಕೆಲವು ವರ್ಷಗಳ ಹಿಂದೆ ಅವರ ವ್ಯವಹಾರವು ಕುಸಿಯಲು ಆರಂಭಿಸುವವರೆಗೂ ಅವರು ಚೆನ್ನಾಗಿಯೇ ಇದ್ದರು. ಅವರು ಶೋರೂಮ್ ಅನ್ನು ಹೊಂದಿದ್ದರು. ರಾಜೀವ್ ಅವರಿಗೆ ಸಂಬಳ ನೀಡಲು ಹಣವಿಲ್ಲದ ಕಾರಣ ಶೂ ಘಟಕದ ಕೆಲಸಗಾರರು ತಮ್ಮ ಕೆಲಸವನ್ನು ತೊರೆದರು. ಪೂನಂ ಮನೆಯನ್ನು ನಡೆಸಲು ಮಹಿಳೆಯರ ಸೂಟ್‌ಗಳನ್ನು ಹೊಲಿಯಲು ಆರಂಭಿಸಬೇಕಾಯಿತು" ಎಂದು ನೆರೆಮನೆಯವರೊಬ್ಬರು ಹೇಳಿದ್ದಾರೆ.

ದಂಪತಿಯ ಕುಟುಂಬ ಸದಸ್ಯರು ಇಬ್ಬರ ನಷ್ಟದ ಬಗ್ಗೆ ತಿಳಿದಿದ್ದರು. ಆದರೆ ಇಬ್ಬರೂ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂದೂ ಯೋಚಿಸಿರಲಿಲ್ಲ" ಎಂದು  ಅವರು ಹೇಳಿದರು.

ರಾಜೀವ್ ತನ್ನ ಪತ್ನಿ ಹಾಗೂ 11 ಮತ್ತು 14 ವರ್ಷದ ಇಬ್ಬರು ಮಕ್ಕಳೊಂದಿಗೆ ನಗರದ ಸುಭಾಷ್ ನಗರ ಪ್ರದೇಶದಲ್ಲಿ ವಾಸವಾಗಿದ್ದರು. ಫೇಸ್ ಬುಕ್ ಅನ್ನು ಲೈವ್ ಆಗಿ ವೀಕ್ಷಿಸುತ್ತಿದ್ದವರು ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News