×
Ad

ಮೀಡಿಯಾ ಒನ್‌ ನಿಷೇಧ ಪ್ರಕರಣ: ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಆದೇಶವನ್ನು ಕಾಯ್ದಿರಿಸಿದ ಕೇರಳ ಹೈಕೋರ್ಟ್

Update: 2022-02-10 20:58 IST

ತಿರುವನಂತಪುರಂ: ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಟಿವಿ(MediaOne TV) ಮೇಲಿನ ಕೇಂದ್ರ ಸರ್ಕಾರದ ನಿಷೇಧವನ್ನು ಎತ್ತಿಹಿಡಿದ ಏಕಸದಸ್ಯ ಪೀಠದ ತೀರ್ಪಿಗೆ ಮಧ್ಯಂತರ ತಡೆ ನೀಡಲು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ನಿರಾಕರಿಸಿದೆ ಎಂದು ʼಲೈವ್ ಲಾʼ ವರದಿ ಮಾಡಿದೆ.

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಮೀಡಿಯಾ ಒನ್ ಪ್ರಸಾರವನ್ನು ಸ್ಥಗಿತಗೊಳಿಸಿದ ಬಳಿಕ, ಜನವರಿ 31 ರಿಂದ ಮಳೆಯಾಲಂ ಸುದ್ದಿ ವಾಹಿನಿಯು ಪ್ರಸಾರವಾಗುತ್ತಿಲ್ಲ. 

ಫೆಬ್ರವರಿ 2 ರಂದು, ನ್ಯಾಯಮೂರ್ತಿ ಎನ್ ನಗರೇಶ್ ಅವರ ಏಕಸದಸ್ಯ ಪೀಠವು ʼಚಾನೆಲ್‌ನ ಭದ್ರತಾ ಕ್ಲಿಯರೆನ್ಸ್ ಅನ್ನು ರದ್ದುಗೊಳಿಸಲು ಶಿಫಾರಸು ಮಾಡಿದ ಗೃಹ ಸಚಿವಾಲಯದ ದಾಖಲೆಗಳು ನೀಡಿದ ಮಾಹಿತಿಗಳು ಚಾನೆಲ್‌ ಅನ್ನು ನಿಷೇಧಿಸುವ ನಿರ್ಧಾರವನ್ನು ಸಮರ್ಥಿಸುತ್ತದೆʼ ಎಂದು ಹೇಳಿತ್ತು.

ಬುಧವಾರ, ಮೀಡಿಯಾ ಒನ್ ಟಿವಿಯನ್ನು ನಿರ್ವಹಿಸುವ ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್, ಚಾನೆಲ್‌ಗಳ ಕೆಲವು ಉದ್ಯೋಗಿಗಳು ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಈ ತೀರ್ಪಿನ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದೆ. ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಗುರುವಾರ ಕೈಗೆತ್ತಿಕೊಂಡಿದೆ.

ಚಾನೆಲ್ ತನ್ನ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ ಶೋಕಾಸ್ ನೋಟಿಸ್ ನೀಡಿರುವುದು "ಖಿನ್ನನೀಯ" ಸತ್ಯ ಎಂದು ಹೇಳಿದೆ. ಯಾವುದೇ "ನಿಜವಾದ ಕಾರಣ" ಇಲ್ಲದೆ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು 350 ಉದ್ಯೋಗಿಗಳ ಜೀವನವನ್ನು ಅತಂತ್ರಗೊಳಿಸಿದೆ ಎಂದು ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News