"ದೇಶದಲ್ಲಿ ನಿರುದ್ಯೋಗವೇ ಇಲ್ಲ, ಇರುವ ಏಕೈಕ ನಿರುದ್ಯೋಗಿಯೆಂದರೆ ಕಾಂಗ್ರೆಸ್ ಪಕ್ಷದ ರಾಜಕುಮಾರ": ತೇಜಸ್ವಿ ಸೂರ್ಯ
ಹೊಸದಿಲ್ಲಿ: ದೇಶದಲ್ಲಿ 2018-2020 ನಡುವೆ ನಿರುದ್ಯೋಗದಿಂದ ಬೇಸತ್ತು 9,140 ಜನರು ಆತ್ಮಹತ್ಯೆಗೈದಿದ್ದಾರೆಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಗೆ ತಿಳಿಸಿದ ದಿನವೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಯೊಂದನ್ನು ನೀಡಿ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು thequint.com ವರದಿ ಮಾಡಿದೆ.
ದೇಶದಲ್ಲಿ ನಿರುದ್ಯೋಗ ಬಹಳಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ "ದೇಶದಲ್ಲಿರುವ ಏಕೈಕ ನಿರುದ್ಯೋಗಿ ವ್ಯಕ್ತಿಯೆಂದರೆ ಕಾಂಗ್ರೆಸ್ ಪಕ್ಷದ ರಾಜಕುಮಾರ,'' ಎಂದು ಹೇಳಿದರು.
"ದೇಶದ ಜಿಡಿಪಿ, ಎಫ್‍ಡಿಐ ಏರಿಕೆಯಾಗಿರುವಾಗ ಹಾಗೂ ಸ್ಟಾರ್ಟ್-ಅಪ್‍ಗಳ ಸಂಖ್ಯೆ ಏರಿಕೆಯಾಗಿರುವಾಗ ಉದ್ಯೋಗ ಸೃಷ್ಟಿ ಆಗದೇ ಇರಲು ಹೇಗೆ ಸಾಧ್ಯ? ಕಾಂಗ್ರೆಸ್ ಪಕ್ಷ ಮತ್ತದರ ವಂಶಪಾರಂಪರ್ಯ ನಾಯಕರು ರಾಜಕೀಯ ನಿರುದ್ಯೋಗವನ್ನು ದೇಶದಲ್ಲಿನ ನಿರುದ್ಯೋಗವೆಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ಪ್ರತಿಭಾನ್ವಿತ ಜನರಿಗೆ ಸಾಕಷ್ಟು ಅವಕಾಶಗಳಿವೆ. ಏಕೈಕ ನಿರುದ್ಯೋಗಿ ವ್ಯಕ್ತಿ ಕಾಂಗ್ರೆಸ್ ಪಕ್ಷದ ರಾಜಕುಮಾರ,'' ಎಂದು ಹೇಳಿ ರಾಹುಲ್ ಅವರನ್ನು ತೇಜಸ್ವಿ ಸೂರ್ಯ ಲೇವಡಿಗೈದರು.
ಇದನ್ನೂ ಓದಿ: ಸಾಮರಸ್ಯದ ಕುರಿತ ಭಾಷಣದ ವೀಡಿಯೊವನ್ನು ʼಮುಸ್ಲಿಮರ ನರಮೇಧಕ್ಕೆ ಕರೆʼ ಎಂದು ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು