-

ವೈರಲ್‌ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ವಾಹಿನಿ ಮುಖ್ಯಸ್ಥರು

ಸಾಮರಸ್ಯದ ಕುರಿತ ಭಾಷಣದ ವೀಡಿಯೊವನ್ನು ʼಮುಸ್ಲಿಮರ ನರಮೇಧಕ್ಕೆ ಕರೆʼ ಎಂದು ತಿರುಚಿ ವೈರಲ್‌ ಮಾಡಿದ ಕಿಡಿಗೇಡಿಗಳು

-

ಬಂಟ್ವಾಳ: ಈಗಾಗಲೇ ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ಪ್ರಕರಣಗಳ ಕುರಿತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಾಮಾಜಿಕ ತಾಣಗಳಲ್ಲಿ ವೀಡಿಯೊವೊಂದರ ಭಾಗವನ್ನು ಕತ್ತರಿಸಿ ತಪ್ಪು ಮತ್ತು ದ್ವೇಷಪೂರಿತ ಸಂದೇಶದೊಂದಿಗೆ ಕಳುಹಿಸಲಾಗುತ್ತಿದೆ. ಸದ್ಯ ಈ ವೀಡಿಯೊ ವೈರಲ್‌ ಆಗಿದೆ. ಆದರೆ ಇದು ಪೂರ್ತಿ ವೀಡಿಯೊದ ಭಾಗವನ್ನು ಕತ್ತರಿಸಿ ತಪ್ಪು ಕಲ್ಪನೆಯನ್ನು ಹರಡಲಾಗಿದೆ ಎಂದು ʼವಾರ್ತಾಭಾರತಿʼ ಸತ್ಯಶೋಧನಾ ವರದಿಯಲ್ಲಿ ಕಂಡುಕೊಂಡಿದೆ. 

ಬಂಟ್ವಾಳ ತಾಲೂಕಿನ ಸಜಿಪ ನಡುವಿನ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಫೆಬ್ರವರಿ 10ರ ಸಂಜೆ ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್‌ ನ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ ರವರು ಮಾತನಾಡಿದ್ದು, ಈ ವೇಳೆ ಹದಗೆಟ್ಟಿರುವ ಸಮಾಜದ ಪರಿಸ್ಥಿತಿ, ನಾವು ಸಾಮರಸ್ಯವನ್ನು ಹೇಗೆ ಸಾಧಿಸಬೇಕು?, ನಮ್ಮ ಧರ್ಮವನ್ನು ಆಚರಿಸಿ ಇತರರಿಗೆ ಗೌರವ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರು. ಆದರೆ ಈ ವೀಡಿಯೋದಲ್ಲಿ ಅವರು ಉದಾಹರಣೆಗೆಂದು ಹೇಳಿದ್ದ ಭಾಗವೊಂದನ್ನು ಮಾತ್ರ ಕತ್ತರಿಸಿದ ಕಿಡಿಗೇಡಿಗಳು ಸಾಮಾಜಿಕ ತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. "ಸಜಿಪದಲ್ಲಿ ಮುಸ್ಲಿಮರ ನರಹತ್ಯೆಗೆ ಕರೆ ನೀಡಲಾಗಿದೆ" ಎಂಬ ಶೀರ್ಷಿಕೆಯನ್ನೂ ನೀಡಲಾಗಿದ್ದು ಸದ್ಯ ಆತಂಕ ಸೃಷ್ಟಿಸಿದೆ.

ಈಗಾಗಲೇ ಸಮಾಜದಲ್ಲಿ ಶಾಂತಿ ಕದಡಿದ್ದು, ಇಂತಹಾ ತಪ್ಪು ಕಲ್ಪನೆಗಳಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗದಿರಲಿ ಎಂಬ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯೊಂದಿಗೆ ಕೂಡಲೇ ʼವಾರ್ತಾಭಾರತಿʼ ತಂಡವು ಈ ವೀಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ.

ವೀಡಿಯೋದಲ್ಲಿ ಅವರು ಮಾತನಾಡಿದ ವಿಚಾರದ ಸಂಪೂರ್ಣ ಸಾರಾಂಶ ಇಲ್ಲಿದೆ:

ನಿಮಗೆಷ್ಟು ಬೇಸರವಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಕೆಲ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ನಮ್ಮ ಸಮಾಜ ಹೀಗಿರಬೇಕು ಎಂಬ ನಿರೀಕ್ಷೆ ಇತ್ತು. ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯ. ಬ್ರಹ್ಮಕಲಶವನ್ನು ನೋಡಿ ನಾವಿದನ್ನು ಕಲಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.    ಅಮೂಲ್ಯವಾದ ಚಿನ್ನವನ್ನು ಉಜ್ಜಿ ಪಾಲಿಶ್‌ ಮಾಡುವ ಅವಶ್ಯಕತೆ ಏನಿದೆ?. ಮಾನವನಿಗೆ ಕಾಲಕಾಲಕ್ಕೆ ಸಂಸ್ಕಾರದ ಅವಶ್ಯಕತೆಯಿದೆ. ಆದರೆ ಈಗ ಸಂಸ್ಕಾರದ ಕೊರತೆ ಇದೆ. ನಮ್ಮ ಜೀವನದ ಎಲ್ಲಾ ಘಟ್ಟಗಳಲ್ಲೂ ಸಂಸ್ಕಾರವಿದೆ. ಆದರೆ ಈಗ ಹೆಸರಿಗೆ ಮಾತ್ರ ನಾಮಕರಣ, ಉಪನಯನ ಮುಂತಾದ ಸಂಸ್ಕಾರಗಳು ಉಳಿದುಕೊಂಡಿವೆ. ದೇವರಿಗೂ ಮನುಷ್ಯರಿಗೂ ಕಾಲಕಾಲಕ್ಕೆ ಸಂಸ್ಕಾರ ಇದ್ದರೆ ಮಾತ್ರ ಅದು ಚಿನ್ನದಂತೆ ಹೊಳೆಯುತ್ತದೆ.

ನಿಜವಾದ ತಂತ್ರಿಗಳ, ಆಚಾರ್ಯರ ಪರಿಶ್ರಮದಿಂದ ಕಲ್ಲು ದೇವರಾಗುತ್ತದೆ. ದೇವಸ್ಥಾನಗಳಲ್ಲಿ ಅನ್ನದಾನ ನಡೆಯಬೇಕು. ಕ್ಷೇತ್ರದಲ್ಲಿ ವೇದಮಂತ್ರಗಳ ಪಠಣ ಆಗ್ಬೇಕು. ಹೀಗಿದ್ದರೆ ಆ ಕ್ಷೇತ್ರ ವೃದ್ಧಿಯಾಗುತ್ತದೆ. 

"ಇವತ್ತು ನಾವು‌ ರಾಜಕೀಯವಾಗಿ ಆಗಿರಬಹುದು ಸಾಮಾಜಿಕವಾಗಿ ಆಗಿರಬಹುದು ಸಮಸ್ಯೆಗಳನ್ನು ಏಕೆ ಎದುರಿಸುತ್ತೇವೆಂದರೆ ನಮ್ಮಲ್ಲಿ ಜ್ಞಾನದ ಕೊರತೆ ಇದೆ. ಸಮಾಜದಲ್ಲಿರುವ ಒಳ್ಳೆತನವನ್ನು ಗುರುತಿಸುವ ದೃಷ್ಟಿ ನಮಗೆ ಇಲ್ಲದಂತಾಗಿದೆ. ಒಳ್ಳೆತನ ಗುರುತಿಸುವಾಗ ನನಗೆ ಶಾರದಾ ಮಾತೆಯ ನೆನಪಾಗುತ್ತದೆ" ಎಂದು ಪತಿಯು ಏನೂ ಅರಿಯದ ಪತ್ನಿಯನ್ನು ಆರಾಧನೆ ಮಾಡುವ ಘಟನೆಯ ಕುರಿತೂ ಅವರು ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದರು.

"ಸಮಾಜದಲ್ಲಿ ಎಲ್ಲರನ್ನೂ ನೋಡಿದಾಗ ಅವರಲ್ಲಿರುವ ತಪ್ಪು ಮಾತ್ರ ನಮಗೆ ಕಾಣುತ್ತದೆ. ಇವತ್ತು ಒಂದು ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾರನ್ನು ನೋಡಿದರೂ ನಾನು ತಪ್ಪು ತಿಳಿಯದೇ ಒಳ್ಳೆಯದನ್ನೇ ತಿಳಿಯುತ್ತೇನೆ ಎಂದು ನಿರ್ಧರಿಸಿದ್ದಕ್ಕೆ ಶಾರದಾ ಮಾತೆ ದೇವಿಯಾದರು. ಭಾರತದಂತಹಾ ದೇಶ ಎಲ್ಲಿದೆ? ಪ್ರಪಂಚದ ಯಾವ ದೇಶಕ್ಕೆ ಹೋದರು ಒಂದು ದೇವರಿರುತ್ತಾರೆ. ಒಂದು ದೇಶ ಇರ್ತದೆ, ಅಥವಾ ಒಬ್ಬ ಪಾದ್ರಿ ಇರುತ್ತಾರೆ. ಆದರೆ, ಅದನ್ನು ಮೀರಿದ್ದು ನಮ್ಮ ಭಾರತದಲ್ಲಿದೆ. ಈಗ ಹಿಂದೂ ಎನ್ನುವ ಪದವನ್ನೇ ತಪ್ಪು ಅರ್ಥ ಮಾಡಿಕೊಳ್ಳತ್ತಾರೆ. ಆದರೆ ಹಿಂದೂ ಎಂದರೆ ಏನೆಂದು ಗೊತ್ತಿದೆಯೇ? ಸಾವರ್ಕರ್‌ ಹೇಳಿದಂತೆ ಈ ದೇಶದಲ್ಲಿ ಹುಟ್ಟಿದವರೆಲ್ಲಾ ಹಿಂದೂಗಳೇ. ಅವರಲ್ಲಿರಬೇಕಾದ ಕ್ವಾಲಿಟಿ ಎಂದರೆ ಅವರು ಈ ದೇಶವನ್ನು ಪ್ರೀತಿಸಬೇಕು. ದೇಶವನ್ನು ಪ್ರೀತಿಸುವವರು ಎಲ್ಲರೂ ಹಿಂದೂಗಳೇ...."

"ಈ ಭಾವ ಸ್ಥಾಯಿಯಾಗಿದ್ದಾಗ ನಮಗೆ ಕನ್‌ಫ್ಯೂಶನ್‌ ಗಳಿರುವುದಿಲ್ಲ. ಆದರೆ, ಅದು ಸ್ಥಿರವಾಗಿರದಿದ್ದಾಗಿ ನಮಗೆ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಈಗ ನೀವು ನೋಡಿ, ಶಾಲಾ ಕಾಲೇಜಿಗೆ ರಜೆ ಕೊಡುವಷ್ಟು ಮಟ್ಟಿಗೆ ಬೆಳೆಯಿತು. ಯಾವ ಮಕ್ಕಳಿಗೆ ಶಿಕ್ಷಣ ಕೊಡಬೇಕಿತ್ತೋ ಅದನ್ನು ಕೊಡಲು ನಮಗೆ ಸಾಧ್ಯವಿಲ್ಲದಾಯಿತು. ಬೇರೆಲ್ಲವನ್ನೂ ಕೊಟ್ಟೆವು. ಈಗ ಶಿಕ್ಷಣ ಇರುವುದೂ ಹಾಗೆಯೇ ಯಾರೋ ಒಬ್ಬ ದುಡ್ಡಿಗಾಗಿ ಹೋಗಿ ಮಾಸ್ಟರ್‌ ಆಗಿ ಸೇರಿರ್ತಾನೆ. ಅಪರೂಪಕ್ಕೆ ಒಳ್ಳೆಯವರಿರ್ತಾರೆ. ಯಾವ ಕೆಲಸವೂ ಸಿಗದಿದ್ದಾಗ ಮಾಸ್ಟರ್‌ ಆಗುವುದು. ಶಿಕ್ಷಣ ಕ್ಷೇತ್ರ ಈಗ ಹಣ ಮಾಡುವ ದಂಧೆಯಂತಾಗಿದೆ. ಒಬ್ಬರ ಜೇಬಿನಿಂದ ಹಣ ಲಪಟಾಯಿಸುವುದು ಹೇಗೆ ಎನ್ನುವುದೇ ಈಗ ವಿದ್ಯೆ ಭಾಗವಾಗಿದೆ. ಮಾನವತೆಯನ್ನು ಯಾರು ಕಲಿತಿರುತ್ತಾನೋ ಅವನೇ ವಿದ್ಯಾವಂತ. ಆದರೆ ಅಂತಹಾ ವಿದ್ಯಾವಂತರನ್ನು ಸೃಷ್ಟಿಸಲು ನಮಗೆ ಸಾಧ್ಯವಾಗುತ್ತಿಲ್ಲ"

"ಯಾರೋ ಒಬ್ಬ ಹುಟ್ಟಿನಿಂದ ಕ್ರಿಶ್ಚಿಯನ್‌ ಆಗಿರುತ್ತಾನೆ. ಮುಸ್ಲಿಂ ಆಗಿರುತ್ತಾನೆ. ಹಿಂದೂ ... ಹಿಂದೂ ಎಂದರೆ ಜಾತಿವಾಚಕ ಶಬ್ಧ ಅಲ್ಲ. ಅದು ನಮ್ಮ ದೇಶದ ಪರಂಪರೆಯ ಹೆಸರು. ಯಾರನ್ನು ನಾವು ಬ್ಯಾರಿಗಳು, ಕ್ರಿಶ್ಚಿಯನ್‌ ಗಳು ಎನ್ನುತ್ತೇವೆಯೋ ಅವರು ಕೂಡಾ ಹಿಂದೂಗಳೇ. ಅವರು ಒಪ್ಪಿಕೊಳ್ಳಲು ತಯಾರಿದ್ದಾರಾ ಎನ್ನುವುದು ಬೇರೆ ಪ್ರಶ್ನೆ. ಯಾರು ದೇಶವನ್ನು ಪ್ರೀತಿಸುವುದಿಲ್ಲವೋ ಆಗ ಆತ ಮ್ಲೇಚ್ಛನಾಗುತ್ತಾನೆ. ಬ್ಯಾರಿಯಾಗುವುದಿಲ್ಲ. ಮ್ಲೇಚ್ಚ ಎಂದರೆ ದೇಶಕ್ಕೆ ವಿರೋಧವಾದ ಕೆಲಸ ಮಾಡುವವನು. ಅಂತಹ ಮ್ಲೇಚ್ಚರು ಎಂದರೆ ದೇಶದ್ರೋಹಿಗಳು ಎಂದರ್ಥ. 

"ಹುಟ್ಟಿನಿಂದ ಅವ ಯಾವುದೇ ಜಾತಿಯಾಗಿರಲಿ, ಆ ಎಲ್ಲರೂ ಕೂಡ ಒಟ್ಟು ಸೇರಿ ಬದುಕ್ಲಿಕ್ಕೆ ಸಾಧ್ಯ ಇದ್ದರೆ ಭಾರತದಲ್ಲಿ ಮಾತ್ರ. ಆ ಭಾರತೀಯತೆಯನ್ನು ನಾವು ಉಳಿಸಿಕೊಳ್ಳಬೇಕು. ಆರಾಧನಾ ಕೇಂದ್ರಗಳು ಅದಕ್ಕೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಬೇಕಿತ್ತು ಆದರೆ ಅಲ್ಲಿ ಹಿಜಾಬ್-ಕೇಸರಿ ಶಾಲು ಗಲಾಟೆ ಆಗುತ್ತಿದೆ. ನೋಡಿ ಎಲ್ಲಿವರೆಗಿನ ಗಲಾಟೆ ಶುರು ಮಾಡಿದ್ರಿ?"

(ತಿರುಚಲ್ಪಟ್ಟ ಮಾತು)

"ಇವರು ಹತ್ತಿಪ್ಪತ್ತು ಪರ್ಸೆಂಟ್‌ ಇದ್ದಾರಲ್ವಾ, ನಾವು ಎಪ್ಪತ್ತು ಪರ್ಸೆಂಟ್‌ ಇದ್ದೇವೆ. ನಾವು ಹಿಂದೂಗಳನ್ನು ಬಾಂಬ್‌ ಹಾಕಿ ಕೊಲ್ತೇವೆ, ನಮ್ಮದೇ ಸಾಮ್ರಾಜ್ಯ ಮಾಡ್ತೇವೆ, ಅವರು 30%ಗಿಂತ ಮೇಲೆ ಬಂದ್ರೆ ಮಾಡಿಯೇ ಮಾಡ್ತಾರೆ ಅವರು. ಘಂಟಾಘೋಷವಾಗಿ ಹೇಳ್ತಾ ಇದ್ದಾರಲ್ವಾ, ಜ್ಞಾನೋದಯ ಯಾವಾಗ ಆಗ್ತದೆ ಅಂತ ನನಗೆ ಗೊತ್ತಿಲ್ಲ. ಅಥವಾ ನಾವು ಹಿಂದೂಗಳು ಏನು ಯೋಚನೆ ಮಾಡ್ತೇವೆ? ಒಬ್ಬನೇ ಒಬ್ಬ ಬ್ಯಾರಿಯ ಸಂತಾನವನ್ನು ಬಿಡಬಾರದು ಎಂದು. ಆಗ್ತದಾ ನಿಮಗೆ? ಯೋಚನೆ ಮಾಡ್ತೀರಾ? ಎಲ್ಲರನ್ನೂ ಕೊಂದು ಹಾಕಬೇಕು ಇವರನ್ನು ಅಷ್ಟೇ...

ಮುಂದುವರಿದ ಭಾಗ

"ಅರಾಜಕತೆಗೆ ದೇಶ ಹೋಗ್ತದೆ ಇಂತಹಾ ಯೋಚನೆ ಮಾಡ್ತಾ ಕುಳಿತರೆ. ಇದಕ್ಕೊಂದು ಪರಿಹಾರ ಬೇಕಲ್ವಾ.. ಎಲ್ಲಿ ಸಿಗುತ್ತದೆ ಆ ಪರಿಹಾರ? ನಮ್ಮ ದೇಶದಲ್ಲಿ ಮಾತ್ರ. ನಮ್ಮ ಪರಂಪರೆಯಲ್ಲಿ ಮಾತ್ರ. ನಾವು ದೇವಸ್ಥಾನದಲ್ಲಿ ಇಂತಹಾ ಬ್ರಹ್ಮಕಲಶೋತ್ಸವ ಮಾಡಿದ್ದಕ್ಕಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಕೆಲಸ ಆಗಬೇಕು. ಒಂದು ಸಲ ನಾವು ಹೆಮ್ಮರವಾಗಿ ಬೆಳೆದು ನಿಂತು ಎಲ್ಲರಿಗೂ ಆಶ್ರಯ ಕೊಡಬೇಕಾಗಿದೆ. ಇಡೀ ಸಮಾಜ... ನಮ್ಮ ದೇಶ... ರಾಷ್ಟ್ರೀಯತೆ ಅಂದರೆ ಅದು. ನಾವು ಹೆಮ್ಮರವಾಗಿ ಬೆಳೆದು ನಿಂತು ಅದರ ಅಡಿಯಲ್ಲಿ ಎಲ್ಲ ಜಾತಿ, ಮತ, ಪಂಥವನ್ನು ಮೀರಿ ಬದುಕಬೇಕಾಗಿದೆ. ಪರಸ್ಪರ ಮನುಷ್ಯನನ್ನು ಮನುಷ್ಯ ಪ್ರೀತಿಸಬೇಕಾಗಿದೆ. ʼನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇʼ ಎನ್ನುವುದು ಮೂರು ಕಾಸಿನ ಕೆಲಸ ಮಾಡುವವರಿಗೆ ಅರ್ಥವಾಗಿದೆಯಾ? ಅರ್ಥವಾಗಿದ್ದರೆ ಇಂತಹಾ ಜಾತಿ ಗಲಾಟೆಗಳನ್ನು ಯಾರೂ ಮಾಡ್ತಿರಲಿಲ್ಲ. ಕ್ಷೇತ್ರವು ಯಾವತ್ತೂ ಜಾತಿ, ಮತ, ಪಂಥಗಳನ್ನು ಮೀರಿರಬೇಕು. ಎಲ್ಲವೂ ದೇವರ ಇಚ್ಛೆ, ಎಲ್ಲವನ್ನೂ ಕರ್ತವ್ಯ ಎಂಬಂತೆ ಮಾಡಬೇಕು. ಮನುಷ್ಯನಿಗೆ ಜೀವನದಲ್ಲಿ ಬೇಕಾಗಿರುವುದು ಯೋಗ ಮತ್ತು ಕ್ಷೇಮ. ಇದರರ್ಥ ಇಲ್ಲದ ಒಳ್ಳೆಯದನ್ನು ಪಡೆದುಕೊಳ್ಳುವುದು, ಇರುವ ಕೆಟ್ಟದ್ದನ್ನು ಕಳೆದುಕೊಳ್ಳುವುದು. "

"ಈಗ ಇಲ್ಲಿ ನೀವು ಬೊಂಬೆಯಾಟವನ್ನು ನೋಡಿದ್ರಿ. ಆಹಾ ಈ ಬೊಂಬೆ ಎಷ್ಟು ಚಂದ ಕುಣೀತದೆ ಅಂತ ಹೇಳಿದ್ರಿ, ಆದ್ರೆ ಆಡುವುದು ಬೊಂಬೆಯಲ್ಲಿ ಮೇಲೊಬ್ಬ ನಮಗೆ ಕಾಣಿಸದವ ಆಡಿಸುತ್ತಾ ಇರುತ್ತಾನೆ. ಭಗವಂತನ ಇಚ್ಛೆಯಿಂದ ನಾವೆಲ್ಲಾ ಜೊತೆ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇವೆ. ಭೌತಿಕ ದೇವಾಲಯದ ನಿರ್ಮಾಣವಾಗಿದೆ. ಇನ್ನೊಂದು ವಿಚಾರ, ದೇವರು ಹೇಳಿದಂತೆ ʼನಾವು ಯಾವ ರೀತಿ ಆರಾಧನೆ ಮಾಡುತ್ತೇವೋ ಅದೇ ರೀತಿಯಲ್ಲಿ ನಾನು ನಿನಗೆ ಅನುಗ್ರಹ ಮಾಡ್ತೇನೆ". ಈಗ ಬ್ರಹ್ಮಕಲಶ ಅವನಿಗೆ ಮಾಡುವುದಲ್ಲ. ನಮಗೆ ಮಾಡಬೇಕು. ಕಾಮಕ್ರೋಧಗಳಿಂದ ನಮ್ಮೊಳಗೆ ಹಾಳಾಗಿ ಹೋಗಿದೆ. ನಮ್ಮ ಮನಸ್ಸನ್ನು ನಾವು ಸರಿಪಡಿಸಿಕೊಳ್ಳಬೇಕಾಗಿದೆ."

"ನಾವು ಸಂಪಾದನೆ ಮಾಡುವ ಹಣದಲ್ಲಿ 20% ಮಾತ್ರ ನಮ್ಮದು. ಉಳಿದ 20% ರಾಜನಿಗೆ ಅಂದರೆ ಸರಕಾರಕ್ಕೆ ಕೊಡಬೇಕಲ್ವಾ.. ಅದು ಕೊಡದಿದ್ದರೆ ಅವರು ಕಿತ್ತುಕೊಳ್ತಾರೆ. 20% ಕರ ಕೊಡಬೇಕು. 20% ಅನ್ನು ದೇವರ ಕಾರ್ಯಗಳಿಗೆ ವ್ಯಯ ಮಾಡಬೇಕು. ಉಳಿದ 20% ದೇವರು ನಮಗೆ ಕಣ್ಣು, ಕೈ ಕೊಟ್ಟಿದಾನಲ್ವಾ ಅದಕ್ಕೆ ಆಭಾರಿಯಾಗಿ ದೀನರಿಗೆ ನೀಡಬೇಕು. ಅಂಗಾಂಗಳಿಲ್ಲದ ದೀನರನ್ನು ಆರೈಕೆ ಮಾಡುವುದು ನಿಜವಾದ ದೇವರ ಪೂಜೆಯಾಗಿದೆ. ಕೊರೋನದ ಸಂದರ್ಭದಲ್ಲಿ ಶವ ಹೊತ್ತಿಸಲು ಜಾಗವಿಲ್ಲದಾದಾಗ ಅಲ್ವಾ ಅದರ ಗಂಭೀರತೆ ನಮಗೆ ಅರಿವಾದದ್ದು? ನೆಲದಲ್ಲಿ ಮಲಗಿದವರು ಜೀವನದ ಕೊನೆಯವರೆಗೆ ಏಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿರುವವರೂ ಇದ್ದಾರೆ. ಅಂತವರ ಸೇವೆ ಮಾಡಬೇಕು. ಈ ಪ್ರೇರಣೆಗಳು ದೇವಸ್ಥಾನದಲ್ಲಿ ಪ್ರಾರಂಭವಾಗಬೇಕು. ದೇವಸ್ಥಾನದ 20% ಆಸ್ತಿಯನ್ನು ಇಂಥವರಿಗೆ ನೀಡದಿದ್ದರೆ ದೇವಸ್ಥಾನಕ್ಕೆ ಬಾಗಿಲು ಹಾಕಬೇಕಷ್ಟೇ...ಸಂಪತ್ತನ್ನು ನಾವು ಮತ್ತೆ ಸಮಾಜಕ್ಕೆ ನೀಡುವ ಮೂಲಕ ವಿನಿಯೋಗಿಸಬೇಕು. ದೇವಸ್ಥಾನದಲ್ಲಿ ರಕ್ತದಾನ ಶಿಬಿರ ನಡೆಯಬೇಕು. 

"ಅವರೆಲ್ಲ ಹೇಗೆ ದಿನಕ್ಕೆ ಐದು ಬಾರಿ ನಮಾಝ್‌ ಮಾಡ್ಬೇಕು ಅಂತ ಹೇಳಿಕೊಡ್ತಾರೆ? ಅವರ ಆರಾಧಾನಲಯಗಳಲ್ಲಿ ಹೇಗಿರಬೇಕೆಂದು ಅವರಿಗೆ ಗೊತ್ತಿದೆ. ಆದರೆ ನಮಗೆ ಅದು ಗೊತ್ತಿಲ್ಲ. ಇಂತಹಾ ಕ್ಷೇತ್ರಗಳ ವತಿಯಿಂದ ಹಿಂದೂಗಳಿಗೆ ಸಂಸ್ಕಾರ ಕೊಡುವ ನಿತ್ಯ ನಿರಂತರ ಕ್ಷೇತ್ರಗಳು ನಡೆಯುತ್ತಾ ಬರಲಿ. ಈ ದೇವಸ್ಥಾನಕ್ಕೆ ಹತ್ತತ್ತು ರೂಪಾಯಿ ದಾನ ಕೊಟ್ಟಿದ್ದಾರಲ್ಲಾ? ನಾಳೆ ಅವರಿಗೆ ಏನಾದರೂ ತೊಂದರೆಯಾದಾಗ ನಾವು ದೇವಸ್ಥಾನದಲ್ಲಿ ಕೂರಿಸಿ ನೋಡಿಕೊಳ್ಳಬೇಕು. ಕರ್ತವ್ಯ ನಮ್ಮದಲ್ವಾ? ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಕ್ಷೇತ್ರದ ವತಿಯಿಂದ ಶಿಕ್ಷಣ ನೀಡುವ ವ್ಯವಸ್ಥೆ ನಡೆಯಬೇಕು. ಇಂತಹಾ ಕೆಲಸಗಳನ್ನು ಮಾಡುತ್ತಾ ಬಂದಾಗ...ದೇವಸ್ಥಾನ ನಮಗೆ ಅನಿವಾರ್ಯವಾಗುತ್ತದೆ. ಹಾಗಾದರೆ ನಾವು ಮಾಡಿದ ಬ್ರಹ್ಮಕಲಶ ಸಾರ್ಥಕವಾಗುತ್ತದೆ. ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರನ್ನು ಪ್ರೀತಿಸುವ ಗುಣ ಇದೆಲ್ಲಾ ಸಂಸ್ಕಾರದಲ್ಲಿ ಹೇಳಿಕೊಡಬೇಕಾಗಿದೆ" ಎಂದು ಅವರು ತಮ್ಮ ಮಾತುಗಳನ್ನು ಮುಗಿಸಿದ್ದಾರೆ.

ಆದರೆ ಸಾಮಾಜಿಕ ತಾಣದಲ್ಲಿ ಈ ವೀಡಿಯೋದಲ್ಲಿರುವ 1:20:31 ನಿಮಿಷದಿಂದ 01:22:33 ವರೆಗೆ ಮಾತ್ರ ಕತ್ತರಿಸಿ, ತಪ್ಪು ಶೀರ್ಷಿಕೆಯೊಂದಿಗೆ ಹರಡಲಾಗಿದೆ. ಈ ವೀಡಿಯೊವನ್ನು ನಮ್ಮ ಕುಡ್ಲ ವಾಹಿನಿಯ ಯೂಟ್ಯೂಬ್‌ ಲೈವ್‌ ನಿಂದ ಕತ್ತರಿಸಲಾಗಿದ್ದು, ಇದನ್ನು ತಪ್ಪು ಸಂದೇಶದೊಂದಿಗೆ ಹರಡುವುದು ಅಕ್ಷಮ್ಯ ಎಂದು ವಾಹಿನಿಯ ಮುಖ್ಯಸ್ಥರು ವಾರ್ತಾಭಾರತಿಗೆ ತಿಳಿಸಿದ್ದಾರೆ. ವೀಡಿಯೋವನ್ನು ತಿರುಚಿದವರ ವಿರುದ್ಧ ಹಾಗೂ ತಪ್ಪುಕಲ್ಪನೆ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಚಾರದ ಕುರಿತು ಕಶೆಕೋಡಿ ಸೂರ್ಯನಾರಾಯಣ ಭಟ್‌ ರನ್ನು ವಾರ್ತಾಭಾರತಿ ಸಂಪರ್ಕಿಸಿದ್ದು, ಈ ಘಟನೆಯ ಕುರಿತು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನನ್ನ ಪೂರ್ಣ ಮಾತುಗಳನ್ನು ನೋಡಿದರೆ ನಾನೇನನ್ನು ಹೇಳಿದ್ದೇನೆ ಎಂಬುವುದು ಸ್ಪಷ್ಟವಾಗುತ್ತದೆ. ಸಮಾಜವನ್ನು ಆದಷ್ಟು ಆರೋಗ್ಯಕರ ಮತ್ತು ಸ್ವಾಸ್ಥ್ಯಪೂರ್ಣವಾಗಿಸಬೇಕಾಗಿದೆ. ಇದನ್ನು ಕೆಟ್ಟದಾಗಿ ಎಡಿಟ್‌ ಮಾಡುವವರು ಇಲ್ಲಿ ಭಾಷಣ ಮಾಡುವವನ ಮನಸ್ಥಿತಿಯನ್ನಾದರೂ ಆಲೋಚಿಸಬೇಕು. ಸಜಿಪ ನಡುವಿನಲ್ಲಿ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದವರು ಅಲ್ಲೇ ಸುತ್ತಮುತ್ತಲಿನಲ್ಲಿದ್ದ ಮುಸ್ಲಿಂ ಬಾಂಧವರಾಗಿದ್ದರು. ಅದನ್ನು ನೋಡಿ ನನ್ನ ಹೃದಯ ತುಂಬಿ ಬಂದಿತ್ತು. ಆರೋಗ್ಯಕರ ಸಮಾಜವನ್ನು ಕೆಲ ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಸತ್ಯಾಂಶವನ್ನು ಜನರಿಗೆ ತಿಳಿಸಿಕೊಟ್ಟಿರುವುದಕ್ಕೆ ಧನ್ಯವಾದ. ನಾವೆಲ್ಲರೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು" ಎಂದು ಹೇಳಿಕೆ ನೀಡಿದ್ದಾರೆ.

ಸಂಪೂರ್ಣ ವೀಡಿಯೋವನ್ನು ಈ ಲಿಂಕ್‌ ನಲ್ಲಿ ವೀಕ್ಷಿಸಬಹುದಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top