×
Ad

ಚತ್ತೀಸ್ಗಢ: ಮಾವೋವಾದಿಗಳೊಂದಿಗಿನ ಎನ್ಕೌಂಟರ್ ನಲ್ಲಿ ಸಿಆರ್‌ಪಿಎಫ್ ಅಧಿಕಾರಿ ಸಾವು

Update: 2022-02-13 01:16 IST

ರಾಯಪುರ: ಚತ್ತೀಸ್ಗಡದ ಬಿಜಾಪುರದಲ್ಲಿ ಶನಿವಾರ ಬೆಳಗ್ಗೆ ಮಾವೋವಾದಿಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಸಹಾಯಕ ಕಮಾಂಡೆಂಟ್ನನ್ನು ಜಾರ್ಖಂಡ್ ನ ಶಾಂತಿ ಭೂಷಣ್ ತಿರ್ಕೆ ಎಂದು ಗುರುತಿಸಲಾಗಿದೆ. ಇದಲ್ಲದೆ ಯೋಧ ಅಪೂರ್ವ ಗಾಯಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್ಪಿಎಫ್ ನ  ಬೆಟಾಲಿಯನ್ 168ನ ಕಂಪೆನಿ ಪುಟ್ಕೇಲ್ ಗ್ರಾಮದ ಸಮೀಪದ ದೊಂಗಾಲ್ ಚಿಂತಾ ನಾಲದ ಸಮೀಪ ರಸ್ತೆ ಸುರಕ್ಷಾ ಕರ್ತವ್ಯದಲ್ಲಿ ಇದ್ದಾಗ ಬೆಳಗ್ಗೆ ಸುಮಾರು 9.30ಕ್ಕೆ ಮಾವೋವಾದಿಗಳು ಗುಂಡಿನ ದಾಳಿ ಆರಂಭಿಸಿದ್ದಾರೆ. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು ಎಂದು ಬಸ್ತಾರ್ ಐಜಿ ಪಿ. ಸುಂದರರಾಜ್ ಅವರು ಹೇಳಿದ್ದಾರೆ.

ಮಾವೋವಾದಿಗಳು ಶುಕ್ರವಾರ ಅಪಹರಿಸಿದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಮಾಡಲು ಬಿಜಾಪುರ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಬಿಜಾಪುರ ಹಾಗೂ ನಾರಾಯಣಪುರ ಜಿಲ್ಲೆಗಳನ್ನು ಸಂಪರ್ಕಿಸುವ ಸೇತುವೆಯ ಉಪ ಎಂಜಿನಿಯರ್ ಅಶೋಕ್ ಪವಾರ್ ಹಾಗೂ ಮೇಸ್ತಿಯನ್ನು ಮಾವೋವಾದಿಗಳು ಬೇಡ್ರಾ ಪ್ರದೇಶದಿಂದ ಅಪಹರಿಸಿದ್ದರು. ಇವರಿಬ್ಬರೂ ಖಾಸಗಿ ಕಂಪೆನಿಯ ಉದ್ಯೋಗಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News