ದೇಶದಲ್ಲಿ 50 ಸಾವಿರಕ್ಕಿಂತ ಕೆಳಗಿಳಿದ ದೈನಿಕ ಕೋವಿಡ್ ಪ್ರಕರಣ

Update: 2022-02-13 01:37 GMT

ಹೊಸದಿಲ್ಲಿ: ದೇಶದಲ್ಲಿ ಶನಿವಾರ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕೆಳಗಿಳಿದಿದ್ದು, ಗರಿಷ್ಠ ಸಂಖ್ಯೆಯಾದ 3.5 ಲಕ್ಷವನ್ನು ತಲುಪಿದ ಜನವರಿ 20 ಕಳೆದ ಮೂರೇ ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಎರಡನೇ ಅಲೆಯಲ್ಲಿ ಕಂಡುಬಂದ ಇಳಿಕೆ ಪ್ರವೃತ್ತಿಗೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ವೇಗದಲ್ಲಿ ಪ್ರಕರಣಗಳು ಇಳಿಕೆಯಾಗಿವೆ.

ಶನಿವಾರ ದೇಶಾದ್ಯಂತ 45,523 ಪ್ರಕರಣಗಳು ದಾಖಲಾಗಿದ್ದು, ಇದು ಜನವರಿ 3ರ ಬಳಿಕ ಕನಿಷ್ಠ ಸಂಖ್ಯೆಯಾಗಿದೆ. ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾದ ಆರೇ ದಿನಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಶುಕ್ರವಾರ ದೇಶದಲ್ಲಿ 50527 ಪ್ರಕರಣಗಳು ದಾಖಲಾಗಿದ್ದವು. ಶನಿವಾರ 402 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ಸಂಖ್ಯೆ 20 ದಿನಗಳಲ್ಲೇ ಕನಿಷ್ಠ.

ಏಳು ದಿನಗಳ ದೈನಿಕ ಸರಾಸರಿ ಜನವರಿ 26ರಂದು ಗರಿಷ್ಠ ಅಂದರೆ 3.09 ಲಕ್ಷ ತಲುಪಿತ್ತು. ಹದಿನೇಳು ದಿನಗಳ ಬಳಿಕ ಸರಾಸರಿ ಪ್ರಕರಣಳ ಸಂಖ್ಯೆ 70 ಸಾವಿರಕ್ಕೆ ಇಳಿದಿದ್ದು, ಶೇಕಡ 22.3ರಷ್ಟು ದರದಲ್ಲಿ ಕಡಿಮೆಯಾಗಿವೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಬಳಿಕ ಮೊದಲ ಅಲೆಯಲ್ಲಿ 50 ಸಾವಿರಕ್ಕಿಂತ ಕೆಳಗಿಳಿಯಲು 103 ದಿನ ತೆಗೆದುಕೊಂಡಿತ್ತು ಹಾಗೂ ಎರಡನೇ ಅಲೆಯಲ್ಲಿ 36 ದಿನ ತೆಗೆದುಕೊಂಡಿತ್ತು. ಅಂದರೆ ಇದೀಗ ಎರಡನೇ ಅಲೆಯಲ್ಲಿ ಇಳಿಕೆಯಾದ ವೇಗಕ್ಕೆ ಹೋಲಿಸಿದರೆ ದುಪ್ಪಟ್ಟು ವೇಗದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ.

ಸಾವಿನ ಸಂಖ್ಯೆ ಕೂಡಾ ಇಳಿಮುಖವಾಗುತ್ತಿದ್ದರೂ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿವೆ. ಏಳು ದಿನಗಳ ದೈನಿಕ ಸರಾಸರಿ ಫೆಬ್ರುವರಿ 5ರಂದು ಗರಿಷ್ಠ ಮಟ್ಟ ಅಂದರೆ 631ನ್ನು ತಲುಪಿತ್ತು. ಆದರೆ ಶೇಕಡ 18ರ ದರದಲ್ಲಿ ಕಡಿಮೆಯಾಗಿ ಇದೀಗ 516ಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News