ಕುರ್ ಆನ್ ನಲ್ಲಿ 7 ಬಾರಿ ಹಿಜಾಬ್ ಉಲ್ಲೇಖ; ಆದರೆ ಇಸ್ಲಾಂಗೆ ಅಗತ್ಯ ಅಲ್ಲ ಎಂದ ಕೇರಳ ರಾಜ್ಯಪಾಲ

Update: 2022-02-13 02:21 GMT
ಫೈಲ್ ಫೋಟೊ 

ತಿರುವನಂತಪುರ: ದೇಶಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿರುವ ನಡುವೆಯೇ, ಸಿಕ್ಖರಿಗೆ ರುಮಲು ಇದ್ದಂತೆ, ಹಿಜಾಬ್ ಇಸ್ಲಾಂನ ಭಾಗವಲ್ಲ ಎಂದು ಕೇರಳ ರಾಜ್ಯಪಾಲ ಅರೀಫ್ ಮುಹಮ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.

ಕುರ್ ಆನ್ ನಲ್ಲಿ ಏಳು ಬಾರಿ ಹಿಜಾಬ್ ಉಲ್ಲೇಖ ಇದೆ. ಆದರೆ ಇದಕ್ಕೂ ಮಹಿಳೆಯರ ವಸ್ತ್ರಸಂಹಿತೆಗೂ ಸಂಬಂಧ ಇಲ್ಲ. ಇದು 'ಪರ್ದಾ'ಗೆ ಸಂಬಂಧಿಸಿದ್ದು. ಅಂದರೆ ನೀವು ಮಾತನಾಡುವಾಗ ನಡುವೆ ಪರ್ದಾ ಇರಬೇಕು ಎಂದು ಅರೀಫ್ ಖಾನ್ ಹೇಳಿದ್ದಾರೆ.

ಸಿಕ್ಖ್ ಧರ್ಮದಲ್ಲಿ ಪೇಟಾ ಧರಿಸುವುದು ಧರ್ಮದ ಭಾಗವಾಗಿದ್ದು, ಹಿಜಾಬನ್ನು ಕೂಡಾ ಇದಕ್ಕೆ ಸಮಾನಾಂತರವಾಗಿ ಪರಿಗಣಿಸಲಾಗುತ್ತಿದೆ ಎಂದು ಕೇರಳ ರಾಜ್ಯಪಾಲರು ಹೇಳಿದ್ದಾರೆ.

"ಹಿಜಾಬ್ ಇಸ್ಲಾಂನ ಭಾಗವಲ್ಲ. ಕುರ್ ಆನ್ ನಲ್ಲಿ ಏಳು ಬಾರಿ ಹಿಜಾಬ್ ಉಲ್ಲೇಖವಿದೆ. ಆದರೆ ಮಹಿಳೆಯರ ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಅಲ್ಲ. ಇದು ಪರ್ದಾಗೆ ಸಂಬಂಧಿಸಿದಂತೆ. ಅಂದರೆ ನೀವು ಮಾತನಾಡುವಾಗ ಮಧ್ಯೆ ಪರ್ದಾ ಇರಬೇಕು" ಎಂದು ಪ್ರತಿಪಾದಿಸಿದ್ದಾರೆ.

"ಸಿಕ್ಖರಿಗೆ ರುಮಾಲು ಧರಿಸಲು ಅವಕಾಶ ನೀಡಿದಂತೆ ಮುಸ್ಲಿಂ ಹುಡುಗಿಯರಿಗೆ ತರಗತಿಗಳ ಒಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂಬ ವಾದ ಅಸಂಬದ್ಧ. ರುಮಾಲು ಸಿಕ್ಖ್ ಧರ್ಮದ ಅಗತ್ಯ ಭಾಗ. ಆದರೆ ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಭಾಗ ಎನ್ನುವುದನ್ನು ಕುರ್ ಆನ್ ನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ" ಎಂಬ ವಾದ ಮಂಡಿಸಿದ್ದಾರೆ.

ದೇಶದಲ್ಲಿ ಎದ್ದಿರುವ ಹಿಜಾಬ್ ವಿವಾದ ಮುಸ್ಲಿಂ ಮಹಿಳೆಯರು ಸಾಧಿಸಿರುವ ಪ್ರಗತಿಯನ್ನು ಹಳಿತಪ್ಪಿಸುವ ಹುನ್ನಾರ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News