​ಚಲಿಸುವ ರೈಲಲ್ಲೇ ಯುವತಿಯ ಮೇಲೆ ಅತ್ಯಾಚಾರ

Update: 2022-02-13 02:43 GMT

ಭೋಪಾಲ್ : ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಪ್ಯಾಂಟ್ರಿ ಮ್ಯಾನೇಜರ್, ಚಲಿಸುವ ರೈಲಿನಲ್ಲೇ 21 ವರ್ಷ ವಯಸ್ಸಿನ ದೆಹಲಿಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಪಾದಿಸಲಾಗಿದೆ.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಲ್ಲಿ ರೈಲಿನಿಂದ ಹೊರಕ್ಕೆ ತಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ, ಹತ್ಯೆ ಮಾಡುವುದಾಗಿಯೂ ಬೆದರಿಸಿದ್ದಾನೆ ಎಂದು ದೂರಿದ್ದು, ಸಂತ್ರಸ್ತೆ ಯುವತಿ ಟಿಕೆಟ್ ರಹಿತವಾಗಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಯುವತಿಯನ್ನು ಆರೋಪಿ ಬಿಟ್ಟ ತಕ್ಷಣ ಆಕೆ ಸಹ ಪ್ರಯಾಣಿಕರ ಬಳಿ ತನ್ನ ದುಃಖ ಹಂಚಿಕೊಂಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಧ್ಯರಾತ್ರಿಯ ವೇಳೆಗೆ ಭೋಪಾಲ್‌ನಲ್ಲಿ ರೈಲು ನಿಲ್ಲಿಸಲಾಯಿತು. ಪೊಲೀಸರು ಬರುವ ವೇಳೆಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ಯಾಂಟ್ರಿ ವಿಭಾಗದ ಎಲ್ಲ 14 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಯಿತು.

ಶನಿವಾರ 330 ಕಿಲೋಮೀಟರ್ ದೂರದ ಝಾನ್ಸಿಯಲ್ಲಿ ಪ್ಯಾಂಟ್ರಿ ಮ್ಯಾನೇಜರ್‌ನನ್ನು ವಶಕ್ಕೆ ಪಡೆಯಲಾಯಿತು. ಆರೋಪಿಯನ್ನು ಭೂಪೇಂದ್ರ ತೋಮರ್ (30) ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಪೋರ್ಸಾ ಮೂಲದವನು ಎನ್ನಲಾಗಿದೆ.

ಸಂತ್ರಸ್ತ ಯುವತಿ ವೈದ್ಯಕೀಯ ಅರೈಕೆಯಲ್ಲಿದ್ದಾಳೆ. ಮೂರು ದಿನಗಳ ಹಿಂದೆ ಉದ್ಯೋಗ ಅರಸಿ ಮುಂಬೈಗೆ ತೆರಳಿದ್ದ ಆಕೆ, ಕೊನೆಗೆ ಮನಸ್ಸು ಬದಲಾಯಿಸಿ, ತಂದೆ ತಾಯಿ ಇರುವಲ್ಲಿಗೇ ವಾಪಸ್ಸಾಗುವ ನಿರ್ಧಾರಕ್ಕೆ ಬಂದಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಮುಂಬೈನಿಂದ ಭೂಸ್ವಾಲ್‌ಗೆ ರೈಲಿನಲ್ಲಿ ಬಂದು ಬಳಿಕ ದೆಹಲಿಗೆ ತೆರಳುವ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ಸಂಜೆ ಏರಿದ್ದರು ಎಂದು ಭೋಪಾಲ್ ಜಿಆರ್‌ಪಿ ಎಸ್‌ಎಚ್‌ಓ ದಿನೇಶ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ್ದನ್ನು ಮಹಿಳೆ ಒಪ್ಪಿಕೊಂಡಿದ್ದು, ಎಸಿ ಬೋಗಿಯ ಹೊರಗೆ ರಾತ್ರಿ ಕಳೆಯಲು ಬಯಸಿದ್ದಾಗಿ ವಿವರಿಸಿದ್ದಾರೆ.

ರಾತ್ರಿ 8.30ರ ಸುಮಾರಿಗೆ ನೀಲಿ ಅಂಗಿಯ ವ್ಯಕ್ತಿಯೊಬ್ಬ ಸಾಮಾನ್ಯ ದರ್ಜೆ ಬೋಗಿಗೆ ತೆರಳುವಂತೆ ಸೂಚಿಸಿದ. ಹೋಗುತ್ತಿದ್ದಾಗ ಪ್ಯಾಂಟ್ರಿ ಕಾರ್ ಬಳಿ ತಡೆದು ಇದರ ಗೇಟಿನ ಬಳಿಯೇ ರಾತ್ರಿ ನಿದ್ರಿಸುವಂತೆ ಸೂಚಿಸಿದ. ಬಳಿಕ ಆರೋಪಿ ಆಕೆಯನ್ನು ಸೆಳೆದುಕೊಂಡು ಉಗ್ರಾಣಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News